ಕುಂದಾನಗರಿ ಬೆಳಗಾವಿಯಲ್ಲಿ ಧಾರ್ಮಿಕ ಸಂಭ್ರಮ ಮನೆಮಾಡಿದೆ. ಪಾಂಗುಳ ಗಲ್ಲಿಯ ಜೈನ ಮಂದಿರದ ವತಿಯಿಂದ ಜೈನ ಮಹಾರಾಜರ ಚಾತುರ್ಮಾಸ ನಿಮಿತ್ತ ಇಂದು ಹಮ್ಮಿಕೊಳ್ಳಲಾಗಿದ್ದ ಭವ್ಯ ಮೆರವಣಿಗೆಗೆ ಭಕ್ತಸಾಗರವೇ ಹರಿದುಬಂದಿತ್ತು. ಸುಮಾರು ಕಾಲು ಶತಮಾನದ ಬಳಿಕ ನಗರಕ್ಕೆ ಆಗಮಿಸಿರುವ ಮಹಾರಾಜರ ಸಾನಿಧ್ಯದಲ್ಲಿ ಜುಲೈ 3 ರಂದು ಐತಿಹಾಸಿಕ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ ಜರುಗಲಿದೆ.

ಸುಮಾರು 25 ವರ್ಷಗಳ ಹಿಂದೆ ಬೆಳಗಾವಿಯಲ್ಲಿಯೇ ದೀಕ್ಷೆ ಸ್ವೀಕರಿಸಿದ್ದ ಪರಮ ಪೂಜ್ಯ ಮಹಾರಾಜರು, ದೀರ್ಘಾವಧಿಯ ಬಳಿಕ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸಿದ್ದಾರೆ. ಅವರ ಪವಿತ್ರ ಸಾನಿಧ್ಯದಲ್ಲಿ ಮುಂದಿನ 4 ರಿಂದ 6 ತಿಂಗಳುಗಳ ಕಾಲ ಧಾರ್ಮಿಕ ಚಾತುರ್ಮಾಸ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಲಿವೆ. ಈ ಮಹೋತ್ಸವದ ಪ್ರಮುಖ ಘಟ್ಟವಾಗಿ ಜುಲೈ 3 ರಂದು ಪಾಂಗುಳ ಗಲ್ಲಿಯ ಮಂದಿರದಲ್ಲಿ ಶ್ರೀ ನೇಮಿನಾಥ ಭಗವಾನ್, ಸರಸ್ವತಿ ಮಾತೆ ಹಾಗೂ ಕ್ಷೇತ್ರಪಾಲ ದೇವರ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವವು ಅತ್ಯಂತ ವೈಭವದಿಂದ ನೆರವೇರಲಿದೆ. ಈ ಧಾರ್ಮಿಕ ಉತ್ಸವದ ಅಂಗವಾಗಿ ಇಂದು ಮಧ್ಯಾಹ್ನ ಪಾಂಗುಳ ಗಲ್ಲಿಯಲ್ಲಿ 5,000ಕ್ಕೂ ಹೆಚ್ಚು ಭಕ್ತಾದಿಗಳಿಗೆ ಭವ್ಯ ಮಹಾಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಇನ್ನು ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಇಂದು ಹಮ್ಮಿಕೊಳ್ಳಲಾಗಿದ್ದ ಭವ್ಯ ಮೆರವಣಿಗೆಯು ಪಾಂಗುಳ ಗಲ್ಲಿಯಿಂದ ಆರಂಭಗೊಂಡು ನಗರದ ಪ್ರಮುಖ ವಾಣಿಜ್ಯ ರಸ್ತೆಗಳಾದ ಗಣಪತ್ ಗಲ್ಲಿ, ಖಡೇ ಬಜಾರ್, ರಾಮದೇವ್ ಗಲ್ಲಿ, ಮಾರುತಿ ಗಲ್ಲಿ, ರವಿವಾರ ಪೇಟೆ ಹಾಗೂ ಮೆನಸಿ ಗಲ್ಲಿಯ ಮೂಲಕ ಸಾಗಿ ಪುನಃ ಜೈನ ಮಂದಿರದಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆಯುದ್ದಕ್ಕೂ ಭಕ್ತರು ಜಯಘೋಷಗಳನ್ನು ಕೂಗುತ್ತಾ ಸಾಗಿದರು. ಈ ಐತಿಹಾಸಿಕ ಧಾರ್ಮಿಕ ಮಹೋತ್ಸವದಲ್ಲಿ ಸಾರ್ವಜನಿಕರು ಹಾಗೂ ಭಕ್ತಾದಿಗಳು ಇನ್ನುಳಿದ ದಿನಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕಾಗಿ ಮಂದಿರದ ಸಂಘಟಕರು ಮನವಿ ಮಾಡಿದ್ದಾರೆ.
