ಗಡಿ ಜಿಲ್ಲೆ ಬೀದರ್‌ನಲ್ಲಿ ನಂಬಿಕೆಗೆ ದ್ರೋಹ ಬಗೆದ ಘೋರ ಘಟನೆಯೊಂದು ಬೆಳಕಿಗೆ ಬಂದಿದೆ. ದೇಶ ಕಾಯುವ ಯೋಧನೊಬ್ಬ ಕಾಮದ ಕಣ್ಣಿಗೆ ಸ್ವಂತ ಪತ್ನಿಯನ್ನೇ ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಎದುರು ಮನೆಯ ಹುಡುಗಿ ಜೊತೆಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆಂಬ ಕಾರಣಕ್ಕೆ, ತವರು ಮನೆಗೆ ಕರೆದೊಯ್ಯುವ ನೆಪದಲ್ಲಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಪತ್ನಿಯನ್ನೇ ಮಾರಣಾಂತಿಕವಾಗಿ ಹಲ್ಲೆ ಮಾಡಿ ಮುಗಿಸಿದ್ದಾನೆ. ಕೊಲೆಯನ್ನು ಅಪಘಾತ ಎಂದು ಬಿಂಬಿಸಲು ಹೋಗಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬೋಳೆಗಾವ್ ಗ್ರಾಮದ ನಿವಾಸಿ, ಆರ್ಮಿ ಉದ್ಯೋಗಿ ಭಗವತ್ ಜ್ಞಾನೇಶ್ವರ್ ಎಂಬಾತನೇ ಪತ್ನಿಯನ್ನೇ ಕೊಂದ ಕಿರಾತಕ ಪತಿ. ಈತನಿಗೆ ಎರಡು ವರ್ಷಗಳ ಹಿಂದೆ ಬೀದರ್ ತಾಲೂಕಿನ ಹೊನ್ನಿಕೇರಿ ಗ್ರಾಮದ ಸಂಜನಾ (26) ಎಂಬಾಕೆಯೊಂದಿಗೆ ವಿವಾಹವಾಗಿತ್ತು. ಸದ್ಯ ಈ ದಂಪತಿ ಬೀದರ್‌ನ ಶಿವನಗರದಲ್ಲಿ ವಾಸವಾಗಿದ್ದರು. ಆದರೆ, ಭಗವತ್‌ಗೆ ತನ್ನ ಎದುರು ಮನೆಯ ಹುಡುಗಿ ಜೊತೆ ಲವ್ವಿಡವ್ವಿ ಶುರುವಾಗಿತ್ತು. ಈ ಅಕ್ರಮ ಸಂಬಂಧದ ವಿಚಾರ ಪತ್ನಿ ಸಂಜನಾಗೆ ತಿಳಿಯುತ್ತಿದ್ದಂತೆ ದಂಪತಿ ನಡುವೆ ಕಲಹ ಏರ್ಪಟ್ಟಿತ್ತು. ಇದೇ ಕಾರಣಕ್ಕೆ ಪತ್ನಿಯನ್ನೇ ಮುಗಿಸಲು ಸ್ಕೆಚ್ ಹಾಕಿದ ಪತಿರಾಯ, ತವರು ಮನೆಗೆ ಹೋಗೋಣ ಎಂದು ನಂಬಿಸಿ ಬೈಕ್ ಮೇಲೆ ಕರೆದುಕೊಂಡು ಹೊರಟಿದ್ದಾನೆ.
ಹೀಗೆ ಹೋಗುವ ಮಾರ್ಗಮಧ್ಯೆ ಭಾಲ್ಕಿ ತಾಲೂಕಿನ ಗಾಯಮುಖ ದೇವಸ್ಥಾನದ ಬಳಿಯ ಹೊನ್ನಿಕೇರಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದು, ಸಂಜನಾ ಮೇಲೆ ಕಬ್ಬಿಣದ ರಾಡ್‌ನಿಂದ ತಲೆ ಹಾಗೂ ಕುತ್ತಿಗೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ, ಈ ಭೀಕರ ಕೃತ್ಯವನ್ನು ಅಪಘಾತದಂತೆ ಬಿಂಬಿಸಲು ತಂತ್ರ ಹೂಡಿದ್ದ. ತೀವ್ರವಾಗಿ ಗಾಯಗೊಂಡಿದ್ದ ಸಂಜನಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಸದ್ಯ ಬೀದರ್ ಜಿಲ್ಲಾಸ್ಪತ್ರೆಯ ಶವಾಗಾರದ ಎದುರು ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
