ಬೆಳಗಾವಿಯ ಅಕಾಡೆಮಿ ಆಫ್ ಕಂಪ್ಯಾರೇಟಿವ್ ಫಿಲಾಸಫಿ ಅಂಡ್ ರಿಲಿಜನ್ (ACPR) ಸಂಸ್ಥೆಯ ಶತಮಾನೋತ್ಸವ ಸಮಾರಂಭದ ಸಮಾರೋಪ ಹಾಗೂ ಗುರುದೇವ್ ಡಾ. ಆರ್.ಡಿ. ರಾನಡೆ ಅವರ 28 ಪುಸ್ತಕಗಳ ಸಮಗ್ರ ಕೃತಿಗಳ ಬೃಹತ್ ಸಂಪುಟದ ಲೋಕಾರ್ಪಣೆ ಜೂನ್ 29 ರಂದು ನಡೆಯಲಿದೆ ಎಂದು ಎಸಿಪಿಆರ್ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಎಂ.ಬಿ. ಜೀರಲಿ ಅವರು ತಿಳಿಸಿದರು.

ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾಹಿತಿಯನ್ನು ನೀಡಿದರು. ಬೆಳಗಾವಿಯ ಹಿಂದವಾಡಿಯಲ್ಲಿರುವ ಗುರುದೇವ ರಾನಡೆ ಮಂದಿರ ಹಾಗೂ ಟಿಳಕವಾಡಿಯ ಜಿಐಟಿ ಕಾಲೇಜು ಆವರಣದ ಕೆ.ಕೆ. ವೇಣುಗೋಪಾಲ್ ಸಭಾಂಗಣದಲ್ಲಿ ಜೂನ್ 29ರ ಸೋಮವಾರದಂದು ಈ ಐತಿಹಾಸಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 8:30ಕ್ಕೆ ಭವ್ಯ ಗ್ರಂಥದಿಂಡಿ ಮೆರವಣಿಗೆಯೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿದ್ದು, ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ “ಶತಮಾನೋತ್ಸವ ಸಭಾಂಗಣ”ದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಶ್ರೀ ಮಂಗೇಶ್ ಜಿ ಭೇಂಢೆ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಗುರುದೇವ ರಾನಡೆಯವರ ಅಮೂಲ್ಯ ತತ್ವಚಿಂತನೆಗಳನ್ನೊಳಗೊಂಡ 28 ಪುಸ್ತಕಗಳ ಮಹಾಸಂಪುಟವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಎಂ.ಬಿ. ಜೀರಲಿ ತಿಳಿಸಿದರು.
ಈ ಮಹತ್ವದ ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಂಸದ ಈರಣ್ಣ ಕಡಾಡಿ, ಶಾಸಕ ಅಭಯ್ ಪಾಟೀಲ್, ಆರ್.ಎಸ್.ಎಸ್ ಕಾರ್ಯಾಕಾರಿಣಿ ಸದಸ್ಯ ಅರವಿಂದರಾವ್ ದೇಶಪಾಂಡೆ, ಡಾ. ರಾನಡೆಯವರ ಮೊಮ್ಮಗ ದೀಪಕ್ ಆಪ್ಟೆ ಹಾಗೂ ಅತುಲ್ ಜೈನ್ ಪಾಲ್ಗೊಳ್ಳಲಿದ್ದಾರೆ. ಸಾಂಸ್ಥಿಕ ಬೆಂಬಲದ ಭಾಗವಾಗಿ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳಾದ ಡಾ. ಸಿ.ಎಂ. ತ್ಯಾಗರಾಜ, ಡಾ. ವಿಷ್ಣುಕಾಂತ್ ಚಟಪಲ್ಲಿ, ಡಾ. ಆನಂದ್ ದೇಶಪಾಂಡೆ ಮತ್ತು ಸುಧೀಂದ್ರ ವಿ. ಗಣಾಚಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸಿಪಿಆರ್ ಅಧ್ಯಕ್ಷರಾದ ಅಶೋಕ್ ನಿಂಬರಗಿ ವಹಿಸಲಿದ್ದು, ಸಾರ್ವಜನಿಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಉಪಮಹಾಪೌರ ಹಣುಮಂತ ಕೊಂಗಾಲಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
