ಲೋಕೋಪಯೋಗಿ ಇಲಾಖೆಯಿಂದ ಸುರೇಶ್ ಚೌಹಾಣ್ ನಿವೃತ್ತಿ.
90 ವರ್ಷದ ತಾಯಿಯಿಂದ ಮಗನಿಗೆ ಸನ್ಮಾನ.
ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಅಡುಗೆಗೆ ಮೆಚ್ಚುಗೆ.
ಶೇಡಬಾಳದ ವಿಶ್ರಾಂತಿ ಗೃಹದಲ್ಲಿ ಸರಳ ಸಮಾರಂಭ.

ಸರ್ಕಾರಿ ಸೇವೆ ಸಿಗುವುದು ಅಪರೂಪ. ಅದನ್ನು ಪ್ರಾೂಮಾಣಿಕವಾಗಿ ನಿರ್ವಹಿಸಿ ನಿವೃತ್ತಿ ಹೊಂದುವುದು ಕಷ್ಟಕರ. ಲೋಕೋಪಯೋಗಿ ಇಲಾಖೆಯಲ್ಲಿ 34 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶೇಡಬಾಳದ ಸರ್ಕಾರಿ ವಿಶ್ರಾಂತಿ ಗೃಹದ ವ್ಯವಸ್ಥಾಪಕ ಸುರೇಶ್ ಚೌಹಾಣ್ ಅವರನ್ನು ಅವರ 90 ವರ್ಷದ ತಾಯಿ ಸನ್ಮಾನಿಸಿ ಆಶೀರ್ವದಿಸಿದ ಅಪರೂಪದ ಕಾರ್ಯಕ್ರಮ ಮಂಗಳವಾರ ಶೇಡಬಾಳದಲ್ಲಿ ಜರುಗಿತು.

ಶೇಡಬಾಳದ ಸರ್ಕಾರಿ ವಿಶ್ರಾಂತಿ ಗೃಹದಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿವೃತ್ತರಾದ ಸುರೇಶ್ ಮಾರುತಿ ಚೌಹಾಣ್ ಅವರನ್ನು ಕುಟುಂಬದವರು ಹಾಗೂ ಆತ್ಮೀಯರು ಸನ್ಮಾನಿಸಿ ಅಭಿನಂದಿಸಿದರು.
ಸುರೇಶ್ ಚೌಹಾಣ್ ಅವರ ತಂದೆ ಮಾರುತಿ ಗೋಪಾಲ ಚೌಹಾಣ್ ಅವರು ಕೂಡ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಬಳಿಕ ಅದೇ ಇಲಾಖೆಯಲ್ಲಿ ಸುರೇಶ್ ಚೌಹಾಣ್ ಅವರಿಗೆ ಸೇವಾ ಅವಕಾಶ ದೊರಕಿತ್ತು. ಅವರ ತಾಯಿ ಶ್ರೀಮತಿ ವಿಮಲ ಮಾರುತಿ ಚೌಹಾಣ್ ಅವರು ಮಗನ ಸೇವಾ ಜೀವನದ ಎಲ್ಲಾ ಹಂತಗಳಲ್ಲೂ ಪ್ರೋತ್ಸಾಹ ಮತ್ತು ಬೆಂಬಲ ನೀಡುತ್ತಾ ಬಂದಿದ್ದಾರೆ.
ಚೌಹಾಣ್ ಕುಟುಂಬವು ಉತ್ತಮ ಅಡುಗೆ ತಯಾರಿಕೆಗೆ ಹೆಸರುವಾಸಿಯಾಗಿದೆ. ವಿಶೇಷವಾಗಿ ಸುರೇಶ್ ಚೌಹಾಣ್ ಅವರು ತಯಾರಿಸುವ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಭೋಜನವು ಅನೇಕ ಗಣ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವಾರು ಗಣ್ಯರು ಅವರ ಅಡುಗೆಯ ರುಚಿಯನ್ನು ಸವಿದು ಶ್ಲಾಘಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಇವರ ಅಡುಗೆ ಮೆಚ್ಚುಗೆಯಾಗಿದ್ದು, ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನದ ವೇಳೆ ಅಡುಗೆ ವ್ಯವಸ್ಥೆಗಾಗಿ ಅವರನ್ನು ಆಹ್ವಾನಿಸಲಾಗುತ್ತದೆ ಎಂದು ತಿಳಿದುಬಂದಿದೆ.
34 ವರ್ಷಗಳ ಸರ್ಕಾರಿ ಸೇವೆಯನ್ನು ಪೂರ್ಣಗೊಳಿಸಿ ನಿವೃತ್ತಿ ಹೊಂದಿದ ಸುರೇಶ್ ಚೌಹಾಣ್ ಅವರನ್ನು ಅವರ 90 ವರ್ಷದ ತಾಯಿ ವಿಮಲ ಚೌಹಾಣ್, ಚಿಕ್ಕಮ್ಮ ಶ್ರೀಮಂತಿ ರಾಮಚಂದ್ರ ಚೌಹಾಣ್, ಪತ್ನಿ ಕಾಂಚನ್ ಚೌಹಾಣ್, ಪುತ್ರಿ ಭಾಗ್ಯಶ್ರೀ ವಿನೋದ ಲಾಡಗಾವ್ಕರ್, ಅಳಿಯ ವಿನೋದ ಲಾಡಗಾವ್ಕರ್, ಸಹೋದರರಾದ ಸಿದ್ದು ಚೌಹಾಣ್, ಮನೋಹರ ಚೌಹಾಣ್, ಸಂತೋಷ್ ಚೌಹಾಣ್, ರಾಜು ಚೌಹಾಣ್, ಸುಲೋಚನಾ ಚೌಹಾಣ್, ಸ್ಮಿತಾ ಚೌಹಾಣ್, ಪುತ್ರ ಕೇದಾರ್ ಚೌಹಾಣ್, ಹಾಗೂ ಶೇಡಬಾಳ ಪಟ್ಟಣ ಪಂಚಾಯಿತಿ ಸದಸ್ಯ ಕುಮಾರ ಪಾಟೀಲ್, ರಾಜಕುಮಾರ ಚೊಳಕೆ, ಭರತೇಶ್ ಗಣೆ, ಸೋಮೇಶ್ ಕಳಿಕೆತ್ತರ್, ಬಸಪ್ಪ ಮಾನೆ, ಸಂಜಯ ಮುಸಲಮರೆ ಸೇರಿದಂತೆ ಅನೇಕರು ಸನ್ಮಾನಿಸಿ ಶುಭ ಹಾರೈಸಿದರು.
90 ವರ್ಷದ ತಾಯಿ ತನ್ನ ಮಗನ ನಿವೃತ್ತಿ ಸಮಾರಂಭದಲ್ಲಿ ಭಾಗವಹಿಸಿ, ಸನ್ಮಾನಿಸಿ ಆಶೀರ್ವದಿಸಿದ ದೃಶ್ಯವು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.
