ಬಳ್ಳಾರಿ ವಲಯದ ರೌಡಿಗಳು ಮತ್ತು ಅಕ್ರಮ ದಂಧೆಕೋರರಿಗೆ ಖಾಕಿ ಪಡೆ ನಡುಕ ಹುಟ್ಟಿಸಿದೆ. ಬಳ್ಳಾರಿ ವಲಯ ಐಜಿಪಿ ಡಾ. ಹರ್ಷ ಅವರ ನೇತೃತ್ವದಲ್ಲಿ ಬರೋಬ್ಬರಿ 22 ರೌಡಿ ನಿಗ್ರಹ ಪಡೆಗಳು ಸರಣಿ ದಾಳಿ ನಡೆಸಿವೆ. ನಾಲ್ಕು ಜಿಲ್ಲೆಗಳ ನೂರಾರು ರೌಡಿ ಶೀಟರ್‌ಗಳ ಮನೆಗಳನ್ನು ಜಾಲಾಡಿರುವ ಪೊಲೀಸರು, ಪ್ರಮುಖ ರೌಡಿಯೊಬ್ಬನ ಮನೆಯಲ್ಲಿ ಮಾರಕಾಸ್ತ್ರ ಹಾಗೂ ಬೇನಾಮಿ ಆಸ್ತಿ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಬಳ್ಳಾರಿ ವಲಯದ ವ್ಯಾಪ್ತಿಗೆ ಬರುವ ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ರೌಡಿಸಂಗೆ ಬ್ರೇಕ್ ಹಾಕಲು ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಲಯ ಐಜಿಪಿ ಡಾ. ಹರ್ಷ ಅವರು, 22 ರೌಡಿ ನಿಗ್ರಹ ಪಡೆಗಳು ಏಕಕಾಲಕ್ಕೆ 381 ರೌಡಿ ಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿ ಸರ್ಚ್ ಆಪರೇಷನ್ ನಡೆಸಿವೆ ಎಂದು ತಿಳಿಸಿದ್ದಾರೆ. ಬಳ್ಳಾರಿ ಜಿಲ್ಲೆಯ 104, ವಿಜಯನಗರದ 106, ಕೊಪ್ಪಳದ 68 ಹಾಗೂ ರಾಯಚೂರಿನ 103 ಮನೆಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ ಬಳ್ಳಾರಿಯ ಕುಖ್ಯಾತ ರೌಡಿ ಹಂದ್ರಾಳು ಸೀತಾರಾಮ್ ಮನೆಯಲ್ಲಿ ಕಾನೂನುಬಾಹಿರವಾಗಿ ಇಟ್ಟುಕೊಂಡಿದ್ದ ಏರ್ ಗನ್, ಹಲವಾರು ಖಾಲಿ ಸ್ಟಾಂಪ್ ಪೇಪರ್‌ಗಳು ಹಾಗೂ ಶಂಕಾಸ್ಪದ ಆಸ್ತಿ ದಾಖಲೆಗಳು ಪತ್ತೆಯಾಗಿದ್ದು, ಇವುಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ.
ಈ ಹೈವೋಲ್ಟೇಜ್ ಕಾರ್ಯಾಚರಣೆಯ ಸಂದರ್ಭದಲ್ಲಿ ರೌಡಿಗಳ ಪ್ರಸ್ತುತ ವಾಸಸ್ಥಳ, ಅವರ ಅಕ್ರಮ ಚಟುವಟಿಕೆಗಳು, ಬಳಸುತ್ತಿರುವ ವಾಹನಗಳು ಹಾಗೂ ಅವರ ಸಹಚರರ ಜಾಲದ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಲಾಗಿದೆ. ಇನ್ನು ದಾಳಿ ವೇಳೆ 16 ಕಡೆ ರೌಡಿಗಳು ಸ್ಥಳದಲ್ಲಿ ಇಲ್ಲದಿರುವುದು ಪತ್ತೆಯಾಗಿದ್ದು, ಅವರಿಗೆ ಖಾಕಿ ಪಡೆ ನೋಟಿಸ್ ಜಾರಿ ಮಾಡಿದೆ. ಇಡೀ ವಲಯದಲ್ಲಿ ಒಟ್ಟು 3,814 ರೌಡಿ ಶೀಟರ್‌ಗಳಿದ್ದು, ಈ ಪೈಕಿ 13 ರೌಡಿಗಳು ಈಗಾಗಲೇ ಮೃತಪಟ್ಟಿದ್ದಾರೆ ಹಾಗೂ ಕೊಲೆ ಆರೋಪದಡಿ 377 ರೌಡಿಗಳು ಸಕ್ರಿಯರಾಗಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಲಯದಿಂದ ಒಟ್ಟು 53 ರೌಡಿಗಳನ್ನು ಗಡಿಪಾರು ಮಾಡಲು ಶಿಫಾರಸು ಮಾಡಲಾಗಿದ್ದು, ಈ ಪೈಕಿ ಇಲಾಖೆಯು ಈಗಾಗಲೇ 10 ಜನರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದೆ ಎಂದು ಐಜಿಪಿ ಸ್ಪಷ್ಟಪಡಿಸಿದ್ದಾರೆ.
