ಮುಂಗಾರು ಹಂಗಾಮಿನಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಈ ಸಂದರ್ಭದಲ್ಲಿ ಆಚರಿಸಲಾಗುವ ಕಾರ ಹುಣ್ಣಿಮೆ ರೈತರ ಪಾಲಿಗೆ ವಿಶೇಷ ಮಹತ್ವದ ಹಬ್ಬವಾಗಿದೆ. ಕೃಷಿಗೆ ಅವಿಭಾಜ್ಯ ಅಂಗವಾಗಿರುವ ಎತ್ತು, ಆಕಳು, ಎಮ್ಮೆ ಹಾಗೂ ಕರುಗಳನ್ನು ಈ ದಿನ ಸ್ನಾನ ಮಾಡಿಸಿ, ಅಲಂಕರಿಸಿ, ಪೂಜಿಸುವ ಸಂಪ್ರದಾಯವಿದೆ. ರೈತನ ಬದುಕಿನ ನಿಜವಾದ ಸಂಗಾತಿಗಳಾದ ಈ ಜೀವಸಂಕುಲದ ಮೇಲಿನ ಕೃತಜ್ಞತೆಯನ್ನು ವ್ಯಕ್ತಪಡಿಸುವ ಹಬ್ಬವೇ ಕಾರ ಹುಣ್ಣಿಮೆ.
ಈ ಹಿನ್ನೆಲೆಯಲ್ಲಿ ವಿಜಯಪುರದ ಮಾಜಿ ಸಚಿವರಾದ ಶ್ರೀ ಅಪ್ಪಾಸಾಹೇಬ ಎಂ. ಪಟ್ಟಣಶೆಟ್ಟಿ ಅವರು ತಮ್ಮ ಹೊಲದಲ್ಲಿರುವ ಜಾನುವಾರುಗಳಿಗೆ ಸ್ನಾನ ಮಾಡಿಸಿ, ಅರಿಶಿನ-ಕುಂಕುಮ ಹಚ್ಚಿ, ಹೂವಿನ ಹಾರಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿದರು. ಈ ಮೂಲಕ ಕಾರ ಹುಣ್ಣಿಮೆಯ ಮಹತ್ವವನ್ನು ಸಾರುತ್ತಾ ರೈತರು ಮತ್ತು ಜಾನುವಾರುಗಳ ನಡುವಿನ ಅವಿನಾಭಾವ ಸಂಬಂಧವನ್ನು ನೆನಪಿಸಿದರು.


