ಬಾಗಲಕೋಟೆಯಲ್ಲಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಅಕ್ರಮವಾಗಿ ಬಳಸುತ್ತಿದ್ದ ಜಾಲಕ್ಕೆ ಆಹಾರ ಇಲಾಖೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ. ನಗರದ ಬಸ್ ನಿಲ್ದಾಣದ ಸುತ್ತಮುತ್ತಲಿನ ಹೋಟೆಲ್ಗಳ ಮೇಲೆ ಮೂರು ಅಧಿಕಾರಿಗಳ ತಂಡ ಜಂಟಿಯಾಗಿ ದಿಢೀರ್ ದಾಳಿ ನಡೆಸಿ, ಅಕ್ರಮವನ್ನು ಪತ್ತೆಹಚ್ಚಿದೆ.
ಬಾಗಲಕೋಟೆ ನಗರದ ಕೇಂದ್ರ ಬಸ್ ನಿಲ್ದಾಣದ ಆಸುಪಾಸಿನಲ್ಲಿರುವ ಹೋಟೆಲ್ಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಗೃಹಬಳಕೆ ಸಿಲಿಂಡರ್ಗಳನ್ನು ಅಕ್ರಮವಾಗಿ ಬಳಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಹಾರ ಇಲಾಖೆಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಮೂರು ಆಹಾರ ನಿರೀಕ್ಷಕರ (Food Inspectors) ನೇತೃತ್ವದ ವಿಶೇಷ ತಂಡಗಳು ಹೋಟೆಲ್ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲಿಸಿದವು. ಈ ವೇಳೆ ವಾಣಿಜ್ಯ ಉದ್ದೇಶಗಳಿಗಾಗಿ ನಿಯಮಬಾಹಿರವಾಗಿ ಅಡುಗೆಗೆ ಬಳಸುತ್ತಿದ್ದ ಬರೋಬ್ಬರಿ 7 ಗೃಹಬಳಕೆಯ ಸಿಲಿಂಡರ್ಗಳನ್ನು ಅಧಿಕಾರಿಗಳು ಸ್ಥಳದಲ್ಲೇ ಜಪ್ತಿ ಮಾಡಿದ್ದಾರೆ. ಸಾರ್ವಜನಿಕರಿಗೆ ಸಿಗಬೇಕಾದ ಸಬ್ಸಿಡಿ ಸಿಲಿಂಡರ್ಗಳನ್ನು ತಮ್ಮ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದ ಹೋಟೆಲ್ ಮಾಲೀಕರ ವಿರುದ್ಧ ಅಧಿಕಾರಿಗಳು ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಗೃಹಬಳಕೆಯ ಸಿಲಿಂಡರ್ಗಳನ್ನು ಇನ್ಮುಂದೆ ವಾಣಿಜ್ಯ ಉದ್ದೇಶಗಳಿಗೆ ಬಳಸಿದರೆ ಹೋಟೆಲ್ ಪರವಾನಗಿ ರದ್ದುಪಡಿಸುವುದಾಗಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಬಾಗಲಕೋಟೆ ನಗರದಾದ್ಯಂತ ಅಕ್ರಮ ಸಿಲಿಂಡರ್ ಬಳಕೆಯ ತಡೆಗೆ ಆಹಾರ ಇಲಾಖೆ ಅಧಿಕಾರಿಗಳು ಕಣ್ಗಾವಲು ತೀವ್ರಗೊಳಿಸಿದ್ದಾರೆ.
