ಚಿಕ್ಕೋಡಿ:ಜೂನ್ 5ರ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಚಿಕ್ಕೋಡಿ ತಾಲೂಕಿನ ಯಡೂರನ ಸರ್ಕಾರಿ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ವೆಂಕಟೇಶ್ವರ ಸೋಷಿಯಲ್ ಫೌಂಡೇಶನ್ ಮತ್ತು ಅರಣ್ಯ ಇಲಾಖೆಯ ಸಹಯೋಗದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.

ಚಿಕ್ಕೋಡಿ ಉಪವಿಭಾಗದ ಅರಣ್ಯ ವಲಯ ಅಧಿಕಾರಿಗಳಾದ ಜಗದೀಶ್ ರಕ್ಕಸಗಿ ಅವರ ವಿಶೇಷ ಸಹಕಾರದೊಂದಿಗೆ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕೋಡಿ ಉಪವಿಭಾಗಾಧಿಕಾರಿಗಳಾದ ಸುಭಾಷ್ ಎಸ್. ಸಂಪಗಾವಿ ಅವರು ವಹಿಸಿದ್ದರು. ಶಾಲಾ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಿದರು.

ಸಸಿ ನೆಟ್ಟ ಬಳಿಕ ಉಪವಿಭಾಗಾಧಿಕಾರಿಗಳು ಶಾಲೆಯ ತರಗತಿ ಹಾಗೂ ಆವರಣವನ್ನು ಕೂಲಂಕಷವಾಗಿ ಪರಿಶೀಲಿಸಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡರು.ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದನ್ನು ಗಮನಿಸಿದ ಅವರು, ತಕ್ಷಣವೇ ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಶೀಘ್ರವಾಗಿ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆದೇಶಿಸಿದರು.
ಶಾಲೆಯ ಮುಖ್ಯ ಗೇಟ್ ಮುರಿದಿರುವುದನ್ನು ಕಂಡು, ಅನಾಹುತಗಳಾಗದಂತೆ ತಕ್ಷಣವೇ ಅದನ್ನು ಸರಿಪಡಿಸಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣಕ್ಕೆ ಅಗತ್ಯವಿರುವ ಅಂತರ್ಜಾಲದ ಸೌಲಭ್ಯ ಇಲ್ಲದಿರುವುದನ್ನು ಅರಿತು, ತಕ್ಷಣವೇ ಚಿಕ್ಕೋಡಿ ಡಿಡಿಪಿಐ ಅವರಿಗೆ ದೂರವಾಣಿ ಕರೆ ಮಾಡಿ ಶಾಲೆಗೆ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲು ತಿಳಿಸಿದರು.
ಶಾಲೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಕರೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶಿಸಿದರು.ಶಾಲೆಯ ಬಿಸಿಯೂಟದ ಗುಣಮಟ್ಟವನ್ನು ಸ್ವತಃ ತಾವೇ ಸ್ವಲ್ಪ ಸೇವಿಸಿ ಪರಿಶೀಲಿಸಿದ ಉಪವಿಭಾಗಾಧಿಕಾರಿಗಳು, ವಿದ್ಯಾರ್ಥಿಗಳಿಗೆ ಉತ್ತಮ ಹಾಗೂ ಪೌಷ್ಟಿಕ ಆಹಾರ ನೀಡಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಂಡರು.
ಶ್ರೀ ವೆಂಕಟೇಶ್ವರ ಸೋಷಿಯಲ್ ಫೌಂಡೇಶನ್ ಯಡೂರ ಸಂಸ್ಥೆಯು ಹಮ್ಮಿಕೊಂಡಿದ್ದ ಈ ಪರಿಸರ ಸ್ನೇಹಿ ಮತ್ತು ಸಾಮಾಜಿಕ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸುಭಾಷ್ ಸಂಪಗಾವಿ ಅವರು, ಸಂಸ್ಥೆಯ ಸತ್ಕಾರ್ಯಗಳಿಗೆ ಮುಂದಿನ ದಿನಗಳಲ್ಲೂ ಯಾವುದೇ ಸಹಾಯ ಬೇಕಿದ್ದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅಲ್ಲದೆ, ಶ್ರೀ ವೆಂಕಟೇಶ್ವರ ಸೋಷಿಯಲ್ ಫೌಂಡೇಶನ್‌ನ ಅಧ್ಯಕ್ಷರಾದ ಲಕ್ಷ್ಮಣ ಶಿಂಗಾಡೆ, ಉಪಾಧ್ಯಕ್ಷರಾದ ಬಸವರಾಜ ಹುನ್ನೂರ, ಕಾರ್ಯದರ್ಶಿ ಮಲ್ಲಿಕಾರ್ಜುನ ಮಠಪತಿ ಹಾಗೂ ಸದಸ್ಯರಾದ ಕಲ್ಲಪ್ಪ ಪುಲಾರೆ, ಶೀತಲ ಬೋರಗಾಂವೆ, ಸಂತೋಷ ಕೋಳಿ, ಸಂತೋಷ ಬೇಡಗೆ, ಕಿರಣ ಸೌಂದತ್ತೆ, ಮಂಜುನಾಥ ಬೇಡಗೆ, ಲಕ್ಷ್ಮೀ ಉಮರಾಣೆ, ಸಂತೋಷ ಶಿಂಗಾಡೆ ಮತ್ತು ಹರಿ ಮಠಕೆ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
