ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ಹಾಡುಹಗಲೇ ಸಿನಿಮೀಯ ಮಾದರಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಮಹಿಳೆಯರನ್ನು ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದು ಕಂಬಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.

ಚಿನ್ನ ಖರೀದಿಸುವ ನೆಪದಲ್ಲಿ ಬಂದ ಖತರ್ನಾಕ್ ಲೇಡಿ, ಮಾಲೀಕನ ಕಣ್ಣು ತಪ್ಪಿಸಿ ನಕಲಿ ಗ್ರಾಹಕಿಯ ನಾಟಕವಾಡಿದ್ದಾಳೆ. ಬೆನಕಟ್ಟಿ ಗ್ರಾಮದ ಜ್ಯುವೆಲರಿ ಶಾಪ್ ಒಂದಕ್ಕೆ ಚಿನ್ನ ಖರೀದಿಸುವ ನೆಪದಲ್ಲಿ ನುಗ್ಗಿದ ಮಹಿಳೆಯರು, ಮಾಲೀಕನ ಗಮನ ಬೇರೆಡೆ ಸೆಳೆದು ಚಿನ್ನಾಭರಣವನ್ನು ಕಳವು ಮಾಡಿದ್ದಾರೆ. ಅತ್ಯಂತ ಚಾಣಾಕ್ಷತನದಿಂದ ಚಿನ್ನವನ್ನು ಬಾಯಲ್ಲಿ ಇಟ್ಟುಕೊಂಡು ಅಂಗಡಿಯಿಂದ ಹೊರನಡೆಯಲು ಯತ್ನಿಸಿದಾಗ ಮಾಲೀಕನಿಗೆ ಸಂಶಯ ಬಂದಿದೆ. ತಕ್ಷಣವೇ ಎಚ್ಚೆತ್ತ ಮಾಲೀಕ ಮತ್ತು ಸ್ಥಳೀಯರು ಮಹಿಳೆಯರನ್ನು ಹಿಡಿದು ಪರಿಶೀಲಿಸಿದಾಗ ಕಳ್ಳತನದ ಕೃತ್ಯ ಬಯಲಾಗಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಕಳ್ಳಿಯರನ್ನು ಕಂಬಕ್ಕೆ ಕಟ್ಟಿ ಹಾಕಿ ಸರಿಯಾಗಿ ಧರ್ಮದೇಟು ನೀಡಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಧಾವಿಸಿದ ಯರಗಟ್ಟಿ ಪೊಲೀಸ್ ಠಾಣೆಯ ಸಿಬ್ಬಂದಿ, ಆರೋಪಿ ಮಹಿಳೆಯರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
