ಅನಾಮಧೇಯ ವ್ಯಕ್ತಿಯೊಬ್ಬರು ಸೆಬಿಗೆ ಪತ್ರ ಬರೆದಿದ್ದು, ಬಳಿಕ ಆ ಮಾಹಿತಿ ಸಿಐಡಿಗೂ ರವಾನೆಯಾಗಿತ್ತು. ಆದ್ದರಿಂದ ಇದನ್ನು ಸಿಐಡಿಗೆ ರವಾನೆ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಹೇಳಿದರು.

ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲಾಧಿಕಾರಿ ಅವರ ಸೂಚನೆಯ ಮೇರೆಗೆ ಶಿವಂ ಅಸೋಸಿಯೇಟ್ ಕುರಿತು ಪರಿಶೀಲನೆ ನಡೆಸಲಾಗಿದ್ದು, ಆರ್ಬಿಐ ಬೆಂಗಳೂರು ಅಧಿಕಾರಿಗಳೊಂದಿಗೂ ಸಂಪರ್ಕ ಸಾಧಿಸಲಾಗಿತ್ತು. ಈ ವೇಳೆ ಕಳುಹಿಸಲಾದ ಲಿಂಕ್ನಲ್ಲಿ ಶಿವಂ ಅಸೋಸಿಯೇಟ್ ನೋಂದಣಿ ಆಗಿರಲಿಲ್ಲ ಎಂಬ ಮಾಹಿತಿ ದೊರೆತಿದೆ ಎಂದು ತಿಳಿಸಿದರು.

“ಒಂದು ಲಕ್ಷ ರೂ. ಠೇವಣಿಗೆ ಮೂರು ಪರ್ಸೆಂಟ್ ಲಾಭ ನೀಡಲಾಗುತ್ತದೆ” ಎಂಬ ಪ್ರಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿತ್ತು. ಇದನ್ನು ಗಮನಿಸಿ ಪರಿಶೀಲನೆ ನಡೆಸಿದಾಗ ಸಾವಿರಾರು ಜನರು ಹಣ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ ಎಂದರು.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತನಿಖೆ ಮುಂದುವರಿಸಲಾಗಿದ್ದು, ನಿನ್ನೆ ಅಧಿಕೃತ ದೂರು ದಾಖಲಾಗಿದೆ. ಆರೋಪಿ ಶಿವಾನಂದ ನೀಲಣ್ಣವರ್ ಅವರ ಸಿಎ ನೀಡಿದ ದಾಖಲೆಗಳನ್ನು ಪರಿಶೀಲಿಸಿದಾಗ 300 ರಿಂದ 400 ಕೋಟಿ ರೂಪಾಯಿ ಮೊತ್ತದ ಬ್ಯಾಲೆನ್ಸ್ ಶೀಟ್ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.
ಸ್ಟಾಕ್ ಮಾರ್ಕೆಟ್, ರಿಯಲ್ ಎಸ್ಟೇಟ್, ಮೀನುಗಾರಿಕೆ ಹಾಗೂ ಸಮಾಜಸೇವೆಗೆ ಹಣ ಹೂಡಿಕೆ ಮಾಡಿರುವುದಾಗಿ ಶಿವಾನಂದ ಹೇಳಿದ್ದಾನೆ. ಆದರೆ ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಲು ಕನಿಷ್ಠ ಮಟ್ಟದ ಜ್ಞಾನ ಅಗತ್ಯವಿದ್ದು, ಆತ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ ಎಂದು ಕಮಿಷನರ್ ತಿಳಿಸಿದರು.
ಶಿವಾನಂದ ಆರಂಭದಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ನಂತರ ಐಸ್ ಕ್ರೀಂ ಫ್ಯಾಕ್ಟರಿ ಆರಂಭಿಸಿ, 2016ರಲ್ಲಿ ಸಾಲ ಪಡೆದು ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಿದ್ದ. ಬಳಿಕ ಹಂತ ಹಂತವಾಗಿ ಜನರಿಂದ ಠೇವಣಿ ಸಂಗ್ರಹ ಆರಂಭಿಸಿದ್ದಾನೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವೆಬ್ಸೈಟ್ ಮೂಲಕ ಹಣಕಾಸು ವ್ಯವಹಾರ ನಡೆಸುತ್ತಿದ್ದ ಶಿವಾನಂದ, ಪೊಲೀಸ್ ತನಿಖೆಗೆ ಸಮರ್ಪಕವಾಗಿ ಸಹಕರಿಸುತ್ತಿಲ್ಲ. ಹೀಗಾಗಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆಯಲಾಗುತ್ತದೆ ಎಂದು ಭೂಷಣ್ ಬೊರಸೆ ಹೇಳಿದರು.
ಇನ್ನೂ, “ನನ್ನ ಬಳಿ 15 ಸಾವಿರ ಬಂದೂಕುಗಳಿವೆ” ಎಂದು ಶಿವಾನಂದ ಹೇಳಿಕೊಂಡಿದ್ದ ವಿಚಾರವೂ ಪೊಲೀಸರಿಗೆ ಅನುಮಾನಕ್ಕೆ ಕಾರಣವಾಗಿತ್ತು ಎಂದು ಹೇಳಿದರು. ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸುವ ಕುರಿತು ಇಂದು ಶಿಫಾರಸು ಮಾಡಲಾಗುತ್ತದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಐಷಾರಾಮಿ ಉಡುಗೊರೆ ಪಡೆದವರನ್ನು ತನಿಖೆಯಲ್ಲಿ ವಿಚಾರಣೆ ಮಾಡಲಾಗುವುದು. ಅದು ಹಣ ಠೇವಣಿ ಹಣ ಎಂದು ತಿಳಿದು ಬಂದಿದೆ ಎಂದರು.
