ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಗುಡುಗು ಸಹಿತ ಮಳೆಯ ಅಬ್ಬರ ಜೋರಾಗಿದ್ದು, ರಸ್ತೆ ಹಾಗೂ ರೈಲು ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.


ಖಾನಾಪುರ ತಾಲೂಕಿನ ಜಾಂಬೋಟಿ ಮಾರ್ಗದ ರಾಮಗುರವಾಡಿ ಕ್ರಾಸ್ ಬಳಿ ಮಳೆ-ಗಾಳಿಗೆ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಪ್ರಭಾರಿ ಎಸಿಎಫ್ ಬೇಲ್ಬಾದೇವಿ ಬಿರಾದಾರ ಅವರು ತಮ್ಮ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದರು. ಜೆಸಿಬಿ ಸಹಾಯದಿಂದ ಮರವನ್ನು ತುರ್ತಾಗಿ ಕತ್ತರಿಸಿ ಪಕ್ಕಕ್ಕೆ ಸರಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒ ಗುರುನಾಥ್ ಬಾಯನ್ನವರ, ಮೇಲಿನಮನಿ ಹಾಗೂ ಅರಣ್ಯ ಸಿಬ್ಬಂದಿ ಪಾಲ್ಗೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.


ರೈಲು ಸಂಚಾರದಲ್ಲಿ ವ್ಯತ್ಯಯ ಮತ್ತು ತೆರವು ಇನ್ನೊಂದೆಡೆ, ನಾಗರಗಾಳಿ ಮತ್ತು ತಾವರಗಟ್ಟಿ ರೈಲು ನಿಲ್ದಾಣಗಳ ನಡುವಿನ ಅರಣ್ಯ ಪ್ರದೇಶದಲ್ಲಿ ಹಳಿಗಳ ಮೇಲೆ ಮರಗಳು ಬಿದ್ದ ಪರಿಣಾಮ ಅಳ್ನಾವರ-ಲೋಂಡಾ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಪ್ರಮುಖವಾಗಿ ಕೊಲ್ಹಾಪುರ-ತಿರುಪತಿ ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲು ಕೆಲ ಕಾಲ ಸ್ಥಗಿತಗೊಂಡಿತ್ತು. ರೈಲ್ವೇ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳೀಯರ ನೆರವಿನೊಂದಿಗೆ ಹಳಿಗಳ ಮೇಲಿದ್ದ ಮರಗಳನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಿದ್ದಾರೆ. ಒಟ್ಟಾರೆ ಕಾಡಂಚಿನ ಪ್ರದೇಶದಲ್ಲಿ ಮಳೆಯ ಆರ್ಭಟದಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಪ್ರವಾಸಿಗರು ಸಂಕಷ್ಟ ಎದುರಿಸುವಂತಾಗಿದೆ.

