ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕಿನ ಕೃಷ್ಣಾನದಿಯಲ್ಲಿ ನೀರು ಕಡಿಮೆಯಾಗುತ್ತಿದೆ. ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗಡಿ ಭಾಗದ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ ನದಿ ತೀರದ ಜನರಲ್ಲಿ ನೀರಿನ ಸಮಸ್ಯೆಯ ಆತಂಕದ ಛಾಯೆ ಮೂಡುತ್ತಿದೆ.


ಚಿಕ್ಕೋಡಿ ತಾಲೂಕಿನ ಯಡೂರ,ಕಲ್ಲೋಳ,ಮಾಂಜರಿ,ಇಂಗಳಿ ಹಾಗೂ ರಾಯಬಾಗ ತಾಲೂಕಿನ ಬಾವನ ಸೌಂದತ್ತಿ, ದಿಗ್ಗೇವಾಡಿ, ಭಿರಡಿ, ಚಿಂಚಲಿ ಸೇರಿದಂತೆ ನಾನಾ ಗ್ರಾಮಗಳ ಬಳಿ ಹರಿದಿರುವ ಕೃಷ್ಣಯಲ್ಲಿ ಇದೀಗ ಅಲ್ಪ ಪ್ರಮಾಣದ ನೀರು ಇದೆ. ಇದೇ ರೀತಿ ಬಿಸಿಲು ಮುಂದುವರಿದರೆ ಅದೂ ಬರಿದಾಗುವುದರಲ್ಲಿ ಸಂಶಯ ಇಲ್ಲ. ಜನತೆ ನದಿ ಒಡಲಿನಲ್ಲಿ ದೊಡ್ಡ ಗುಂಡಿಗಳನ್ನು ನೀರು ಪಡೆಯುವಂಥ ಪರಿಸ್ಥಿತಿ ಈಗಲೇ ಕಳವಳ ಉಂಟು ಮಾಡಿದೆ.


ಲಕ್ಷಾಂತರ ರೂ. ಖರ್ಚು ಮಾಡಿ ರೈತರು ಬೆಳೆಗಳನ್ನು ಬೆಳೆದಿದ್ದಾರೆ. ಇದೀಗ ನೀರಿಲ್ಲದೇ ಬೆಳೆಗಳು ಕಮರಿ ಹೋಗುವ ಆತಂಕ ಮೂಡಿದೆ. ಮೇವಿನ ಕೊರತೆ, ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಅನೇಕ ಗ್ರಾಮಗಳು ಕೃಷ್ಣಾ ನದಿಯನ್ನೇ ಅವಲಂಬಿಸಿವೆ. ಈ ಭಾಗದ ಜನತೆ ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಇಂಥ ಸಂಕಷ್ಟ ಸಾಮಾನ್ಯವಾಗಿದೆ.
ಕೃಷ್ಣಾನದಿಯಲ್ಲಿ ನೀರಿಲ್ಲದೆ ಎರಡು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಸ್ಥಗಿತವಾಗುವ ಸಾಧ್ಯತೆ ಇದೆ. ಕಂಚಕರವಾಡಿ, ದಿಗ್ಗೇವಾಡಿ, ಬಿರಡಿ, ಜಲಾಲಪುರ, ಯಡ್ರಾಂವ ಗ್ರಾಮಗಳು ಸೇರಿದ ಒಂದು ಯೋಜನೆ ಹಾಗೂ ಬೆಂಡವಾಡ, ಮೇಖಳಿ ಹುಬ್ಬರವಾಡಿ, ಮಂಟೂರ ಸೇರಿ 11 ಗ್ರಾಮಗಳನ್ನು ಒಳಗೊಂಡ ಮತ್ತೊಂದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬಂದ್ ಆಗುವ ಆತಂಕ ಮೂಡಿದೆ.
ಸೌಂದತ್ತಿ ಬಳಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಮಾಡುವ ಕೃಷ್ಣಾ ನದಿ ಒಳ ಹರಿವಿನಲ್ಲಿ ಇರುವ ಜಾಕ್ ವೆಲ್‌ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಬೋರ್ ವೆಲ್‌ಳ ಅಂತರ್ಜಲ ಕುಸಿಯುತ್ತಿದೆ. ನೀರಿಗಾಗಿ ನಾಗರಿಕರು ಪರಿತಪಿಸುವ ಪರಿಸ್ಥಿತಿ ಎದುರಾಗಲಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೃಷ್ಣಾನದಿ ನೀರು ಬತ್ತುವ ಮುನ್ನವೇ ಮಹಾರಾಷ್ಟ್ರ ಸರಕಾರದ ಜತೆ ಮಾತುಕತೆ ನಡೆಸಿ, ಅಲ್ಲಿಂದ ನೀರು ಬಿಡಿಸುವ ಕೆಲಸ ಮಾಡಬೇಕೆಂಬುದು ಒತ್ತಾಯವಾಗಿದೆ.
