State

ಸಚಿವ ಡಿ. ಸುಧಾಕರ್ ಅಸ್ತಂಗತ: ಚಿತ್ರದುರ್ಗದ ಧೀಮಂತ ನಾಯಕನಿಗೆ ಸಿಎಂ ಸೇರಿ ಗಣ್ಯರ ಕಂಬನಿ

Share

• ಸಚಿವ ಡಿ ಸುಧಾಕರ್ ಇನ್ನಿಲ್ಲ
• ಶ್ವಾಸಕೋಶ ಸೋಂಕಿನಿಂದ ಕೊನೆಯುಸಿರೆಳೆದ ನಾಯಕ
• ನಾಳೆ ಚಳ್ಳಕೆರೆಯಲ್ಲಿ ಸಚಿವರ ಅಂತ್ಯಕ್ರಿಯೆ
• ಹಿರಿಯ ಒಡನಾಡಿಯ ನಿಧನಕ್ಕೆ ಸಿಎಂ ಸಂತಾಪ

ರಾಜ್ಯ ಯೋಜನಾ ಮತ್ತು ಸಾಂಖಿಕ ಸಚಿವರು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಿ.‌ಸುಧಾಕ‌ರ್(66) ಇಂದು ಬೆಳಗ್ಗೆ ಬೆಂಗಳೂರಿನ ಕೃಷ್ಣ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌) ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಆರ್.ಅಶೋಕ್ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.
ಮಂಡಿ ಚಿಪ್ಪು ಶಸ್ತ್ರಚಿಕಿತ್ಸೆಗಾಗಿ ಯಶವಂತಪುರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಡಿ.ಸುಧಾಕರ್ ಅವರಿಗೆ ಶ್ವಾಸಕೋಶದ ಸೋಂಕು ತಗಲಿತ್ತು. ಹೀಗಾಗಿ, ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ತಜ್ಞ ವೈದ್ಯರ ಸತತ ಚಿಕಿತ್ಸೆ ನಂತರವೂ ಅವರು ಚೇತರಿಸಿಕೊಳ್ಳಲಿಲ್ಲ ಎಂದು ತಿಳಿದು ಬಂದಿದೆ.
ಗೌರವಾನ್ವಿತ ಸಚಿವರಾದ ಸುಧಾಕರ್ ಡಿ (66 ವರ್ಷ) 10-05-2026ರ ಬೆಳಿಗ್ಗೆ 3.15ಕ್ಕೆ ಎಲೆಕ್ಟ್ರಾನಿಕ್ ಸಿಟಿಯ ಕೃಷ್ಣ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಿಧನ ಹೊಂದಿದ್ದಾರೆ” ಎಂದು ಕಿಮ್ಸ್ ನಿರ್ದೇಶಕ ಡಾ.ಆರ್.ಚಿನ್ನದುರೈ ಅವರು ವೈದ್ಯಕೀಯ ಬುಲೆಟಿನ್‌ನಲ್ಲಿ ತಿಳಿಸಿದ್ದಾರೆ.
ಇಂದು ಮಧ್ಯಾಹ್ನ 12ರಿಂದ 4 ಗಂಟೆಯವರೆಗೆ ಹಿರಿಯೂರಿನ ನೆಹರೂ ಮೈದಾನದಲ್ಲಿ ಸಚಿವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಚಳ್ಳಕೆರೆಯ ಸ್ವಗೃಹದಲ್ಲಿ ಪೂಜೆ ವಿಧಿ-ವಿಧಾನಗಳು ನೆರವೇರಲಿವೆ. ಚಳ್ಳಕೆರೆ ಡಿ.ಸುಧಾಕರ್ ಕ್ರೀಡಾಂಗಣದಲ್ಲಿಯೂ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೇ 11ರಂದು (ನಾಳೆ) ಮಧ್ಯಾಹ್ನ 3ರಿಂದ 4 ಗಂಟೆಯ ಸುಮಾರಿಗೆ ಅಂತ್ಯಕ್ರಿಯೆಯ ವಿಧಿ-ವಿಧಾನಗಳು ನಡೆಯಲಿವೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸಚಿವ ಡಿ.ಸುಧಾಕರ್ ನಿಧನಕ್ಕೆ ಸಂತಾಪ ಸೂಚಿಸಿರುವ ಸಿಎಂ ಸಿದ್ಧರಾಮಯ್ಯನವರು ನಮ್ಮ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಸಚಿವರು, ಹಿರಿಯ ನಾಯಕರು ಆಗಿದ್ದ ಡಿ.ಸುಧಾಕರ್ ಅವರ ಅಕಾಲಿಕ ನಿಧನದಿಂದ ದುಃಖಿತನಾಗಿದ್ದೇನೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ನಾನು ಖುದ್ದು ಆಸ್ಪತ್ರೆಗೆ ಭೇಟಿನೀಡಿ ಸುಧಾಕರ್‌ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಂದ ಅವರ ಆರೋಗ್ಯದ ಮಾಹಿತಿ ಪಡೆದಿದ್ದೆ, ಈ ವೇಳೆ ಅವರು ಗುಣಮುಖರಾಗುವ ಭರವಸೆ ನನ್ನಲ್ಲಿ ಮೂಡಿತ್ತು.ಜನಸೇವೆಯಲ್ಲಿ‌ ಅಪಾರ ಕಾಳಜಿ ಮತ್ತು ಬದ್ಧತೆಯಿದ್ದ ವ್ಯಕ್ತಿ ಸುಧಾಕರ್. ಇಂಥವರು ಇನ್ನಷ್ಟು ಕಾಲ ಜನರ ನಡುವೆ ಇರಬೇಕಿತ್ತು. ವೈದ್ಯರ ನಿರಂತರ ಪ್ರಯತ್ನ, ನಮ್ಮೆಲ್ಲರ ಹಾರೈಕೆಯ ಹೊರತಾಗಿಯೂ ಇಂದು ಸುಧಾಕರ್ ಅವರು ನಮ್ಮನ್ನಗಲಿದ್ದಾರೆ. ಇದು ಅತ್ಯಂತ ನೋವಿನ ಗಳಿಗೆ ಎಂದಿದ್ದಾರೆ.

Tags:

error: Content is protected !!