ಶಿವಂ ಅಸೋಸಿಯೇಟ್ಸ್ ಎಂಬ ಸಂಸ್ಥೆ ನಕಲಿ ಕಂಪನಿಯಾಗಿದ್ದು, ಇಂತಹ ಬೋಗಸ್ ಕಂಪನಿಗಳಲ್ಲಿ ಸಾರ್ವಜನಿಕರು ತಮ್ಮ ಜೀವಿತಾವಧಿ ದುಡಿದ ಹಣವನ್ನು ಠೇವಣಿ ಇಡಬಾರದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ವಿರುದ್ಧ ಜಿಲ್ಲಾಡಳಿತ ಗಂಭೀರ ತನಿಖೆ ಕೈಗೊಂಡಿದ್ದು, ಠೇವಣಿದಾರರ ಹಿತಾಸಕ್ತಿ ಕಾಪಾಡಲು ಜಿಲ್ಲಾಡಳಿತ ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದರು.
ಕಳೆದ 29-04-2026ರಂದು ಕೆಪಿಐಡಿ ಹಾಗೂ ಬಡ್ಸ್ ಸೆಲ್ ರಚನೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಅಕ್ರಮ ಹಣಕಾಸು ವ್ಯವಹಾರ ನಡೆಸುತ್ತಿರುವ ಸಂಸ್ಥೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರಿಂದ ಅನಧಿಕೃತವಾಗಿ ಹಣ ಸಂಗ್ರಹಿಸುವ ಸಂಸ್ಥೆಗಳ ವಿರುದ್ಧ ಬಡ್ಸ್ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಕಳೆದ ಒಂದು ತಿಂಗಳಿನಿಂದ ಗೌಪ್ಯವಾಗಿ ಮಾಹಿತಿ ಕಲೆಹಾಕಲಾಗುತ್ತಿತ್ತು. ಸಂಸ್ಥೆಯ ಹಣಕಾಸು ವ್ಯವಹಾರ, ಸಾರ್ವಜನಿಕರಿಂದ ಸಂಗ್ರಹಿಸಿದ ಠೇವಣಿ ಹಣವನ್ನು ಎಲ್ಲಿಗೆ ವರ್ಗಾವಣೆ ಮಾಡಲಾಗಿದೆ, ಯಾವ ರೀತಿಯಲ್ಲಿ ಬಳಸಲಾಗಿದೆ ಎಂಬುದರ ಕುರಿತು ಅಧಿಕಾರಿಗಳು ಸವಿಸ್ತಾರ ತನಿಖೆ ನಡೆಸಿದ್ದಾರೆ ಎಂದು ಹೇಳಿದರು.
ನಾಲ್ಕು ಪ್ರಮುಖ ಸ್ಥಳಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಹಣಕಾಸು ವ್ಯವಹಾರ, ಬ್ಯಾಂಕ್ ಖಾತೆಗಳ ವಿವರ, ಠೇವಣಿದಾರರ ಮಾಹಿತಿ ಸೇರಿದಂತೆ ಹಲವು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ ಸಂಸ್ಥೆಯ ಬಳಿ ಅಗತ್ಯ ಅನುಮತಿ ಪತ್ರ, ಲೈಸೆನ್ಸ್ ಹಾಗೂ ಆರ್ಬಿಐ ಮಾನ್ಯತೆ ಇಲ್ಲದಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.

ಆರ್ಬಿಐ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿದರದ ಆಮಿಷ ಒಡ್ಡಿ ಹಣ ಹೂಡಿಕೆ ಮಾಡಿಸಿಕೊಳ್ಳಲಾಗುತ್ತಿತ್ತು. ಇದುವರೆಗೆ ಸುಮಾರು 3,500 ಜನರಿಂದ ಕೋಟಿ ಕೋಟಿ ರೂಪಾಯಿ ಹಣ ಸಂಗ್ರಹಿಸಿರುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.
ಈ ಕುರಿತು ಬೆಳಗಾವಿ ಉಪವಿಭಾಗಾಧಿಕಾರಿಗಳು ಸುಮಾರು 150 ಪುಟಗಳ ಸಮಗ್ರ ತನಿಖಾ ವರದಿಯನ್ನು ಸಿದ್ಧಪಡಿಸಿದ್ದು, ವರದಿಯನ್ನು ನಿನ್ನೆ ರಾತ್ರಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ತನಿಖೆಯಲ್ಲಿ ಹಣಕಾಸು ವರ್ಗಾವಣೆ, ಠೇವಣಿದಾರರ ಪಟ್ಟಿ, ಹೂಡಿಕೆ ದಾಖಲೆಗಳು ಸೇರಿದಂತೆ ಹಲವು ಅಕ್ರಮ ಅಂಶಗಳು ಪತ್ತೆಯಾಗಿವೆ ಎಂದು ಹೇಳಿದರು.
ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸುಮಾರು 35 ಸಾವಿರಕ್ಕೂ ಹೆಚ್ಚು ಜನರು ಈ ವಂಚನೆಗೆ ಒಳಗಾಗಿರುವ ಸಾಧ್ಯತೆ ಇದೆ ಎಂದು ಹೇಳಿದರು.
ಸಾರ್ವಜನಿಕರು ಹೆಚ್ಚಿನ ಬಡ್ಡಿದರದ ಆಸೆಗೆ ಮೋಸ ಹೋಗಬಾರದು. ಯಾವುದೇ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡುವ ಮೊದಲು ಅದರ ಮಾನ್ಯತೆ, ಆರ್ಬಿಐ ಅನುಮತಿ ಹಾಗೂ ಕಾನೂನುಬದ್ಧ ದಾಖಲೆಗಳ ಬಗ್ಗೆ ಪರಿಶೀಲನೆ ಮಾಡಬೇಕು. ಇಲ್ಲವಾದರೆ ಜೀವನಪೂರ್ತಿ ದುಡಿದು ಸಂಪಾದಿಸಿದ ಹಣವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಎಚ್ಚರಿಕೆ ನೀಡಿದರು.
