ಅಡವಿ ಬಿಟ್ಟು ನಾಡಿಗೆ ಬಂದ ಜಿಂಕೆಯೊಂದು ದುರಂತ ಅಂತ್ಯ ಕಂಡಿದೆ. ನಾಯಿಗಳ ಬೆನ್ನಟ್ಟುವಿಕೆಯಿಂದ ಕಂಗೆಟ್ಟು, ಗಾಯಗೊಂಡು ಅರಣ್ಯ ಇಲಾಖೆಯ ಕಚೇರಿಯ ಆವರಣದಲ್ಲೇ ಈ ಜಿಂಕೆ ಕೊನೆಯುಸಿರೆಳೆದಿರುವುದು ಮರುಗುವಂತೆ ಮಾಡಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾ ಪಟ್ಟಣದ ಮಾರುಕಟ್ಟೆಯಲ್ಲಿ ಇಂದು ಬೆಳಿಗ್ಗೆ ಅಪರೂಪದ ಅತಿಥಿಯೊಂದು ಪ್ರತ್ಯಕ್ಷವಾಗಿತ್ತು. ಕಾಡು ಬಿಟ್ಟು ನಾಡಿಗೆ ಬಂದಿದ್ದ ಈ ಜಿಂಕೆಯು ಪಟ್ಟಣದ ಕೇಂದ್ರ ಭಾಗದಲ್ಲಿ ಓಡಾಡುತ್ತಿರಬೇಕಾದರೆ, ಬೀದಿ ನಾಯಿಗಳು ಅದರ ಬೆನ್ನತ್ತಿವೆ. ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಗಾಬರಿಯಿಂದ ಓಡುವ ವೇಳೆ ಜಿಂಕೆ ತೀವ್ರವಾಗಿ ಗಾಯಗೊಂಡಿದೆ. ಪ್ರಾಣ ರಕ್ಷಣೆಗಾಗಿ ಓಡುತ್ತಲೇ ಸಮೀಪದ ಅರಣ್ಯ ಇಲಾಖೆಯ ಕಂಪೌಂಡ್ ಒಳಗೆ ನುಗ್ಗಿದೆ. ತಕ್ಷಣ ಇದರ ಮಾಹಿತಿಯನ್ನು ನಮ್ಮ ವರದಿಗಾರರು ಅರಣ್ಯ ಇಲಾಖೆಯ ಸಿಬ್ಬಂದಿಗೆ ತಿಳಿಸಿದ್ದಾರೆ. ಜಿಂಕೆಯನ್ನು ತಕ್ಷಣವೇ ವಶಕ್ಕೆ ಪಡೆದ ಅಧಿಕಾರಿಗಳು, ಅದಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಲು ಮುಂದಾದರು. ಗಾಯಗೊಂಡ ಜಿಂಕೆಯನ್ನು ಮತ್ತೆ ಅರಣ್ಯಕ್ಕೆ ಬಿಡಬೇಕು ಎನ್ನುವಷ್ಟರಲ್ಲೇ ಅದು ತೀವ್ರ ಆಘಾತ ಮತ್ತು ಗಾಯಗಳಿಂದಾಗಿ ಉಸಿರು ಚೆಲ್ಲಿದೆ. ಮೂಕಪ್ರಾಣಿಯ ಈ ಅಕಾಲಿಕ ಸಾವು ಲೋಂಡಾದ ಸಾರ್ವಜನಿಕರಲ್ಲಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ

