ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಿಟದಾಳ ಗ್ರಾಮದಲ್ಲಿ ಈಗ ಬಾರ್ ಸಂಘರ್ಷ ತಾರಕಕ್ಕೇರಿದೆ. ಊರಿಗೆ ಮದ್ಯದ ಅಂಗಡಿ ಬೇಡ ಎಂದು ಗ್ರಾಮಸ್ಥರು ಗೋಗರೆಯುತ್ತಿದ್ದರೂ, ಜನರ ಮಾತಿಗೆ ಬೆಲೆ ಕೊಡದೆ ದರ್ಪದಿಂದ ಬಾರ್ ನಿರ್ಮಾಣ ಮಾಡುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಸವದತ್ತಿ ತಾಲೂಕಿನ ಕಿಟದಾಳ ಗ್ರಾಮದಲ್ಲಿ ಬಾರ್ ಆರಂಭಿಸುವ ವಿಚಾರ ಈಗ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಗ್ರಾಮಸ್ಥರು ಮೊದಲಿನಿಂದಲೂ “ನಮ್ಮ ಊರಿಗೆ ಬಾರ್ ಬೇಡ” ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ರಾಮದುರ್ಗ ಶಾಸಕ ಅಶೋಕ್ ಪಟ್ಟಣ ಅವರ ಮಾಜಿ ಪಿಎ ಕೃಷ್ಣ ಬೂದಿಗೊಪ್ಪ ಅವರು ಜನರ ವಿರೋಧದ ನಡುವೆಯೂ ಬಾರ್ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಬಕಾರಿ ಇಲಾಖೆಯ ವಾಹನಗಳನ್ನು ತಡೆದು ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದ ಗ್ರಾಮಸ್ಥರು, ಯಾವುದೇ ಕಾರಣಕ್ಕೂ ಮದ್ಯದ ಅಂಗಡಿ ತೆರೆಯಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಹೋರಾಟದ ನಡುವೆ ಶಾಸಕರ ಬೆಂಬಲಿಗರು ಗೂಂಡಾಗಳನ್ನು ಕರೆತಂದು ಗ್ರಾಮಸ್ಥರಿಗೆ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ. “ಗ್ರಾಮದ ಜನ ವಿರೋಧಿಸಿದರೂ ಸರಿ, ನಾನು ಬಾರ್ ಪ್ರಾರಂಭ ಮಾಡೇ ಮಾಡುತ್ತೇನೆ” ಎಂದು ಕೃಷ್ಣ ಬೂದಿಗೊಪ್ಪ ದರ್ಪ ತೋರುತ್ತಿದ್ದಾರೆ ಎಂದು ಜನರು ದೂರಿದ್ದಾರೆ. ಶಾಸಕ ಅಶೋಕ್ ಪಟ್ಟಣ ಅವರ ಆಶೀರ್ವಾದದಿಂದಲೇ ಈ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿರುವ ಗ್ರಾಮಸ್ಥರು, ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಏನಾದರೂ ಅಹಿತಕರ ಘಟನೆ ನಡೆದರೆ ಅದಕ್ಕೆ ಶಾಸಕರೇ ನೇರ ಹೊಣೆ ಎಂದು ಎಚ್ಚರಿಸಿದ್ದಾರೆ.
ಸದ್ಯ ಕಿಟದಾಳ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳ ನಡೆ ಕುತೂಹಲ ಮೂಡಿಸಿದೆ.
