Belagavi

ಕ್ಯಾನ್ಸರ್ ನೋವಿಗೆ ಬೇಸತ್ತು ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಬೆಳಗಾವಿಯ ಹಿರಿಯ ವೈದ್ಯ!!!

Share

ಕ್ಯಾನ್ಸರ್ ರೋಗದ ಅತಿಯಾದ ನೋವನ್ನು ತಡೆಯಲಾರದೆ ಹಿರಿಯ ವೈದ್ಯರೊಬ್ಬರು ತಮಗೆ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಶುಕ್ರವಾರ ಬೆಳಿಗ್ಗೆ ಬೆಳಗಾವಿಯಲ್ಲಿ ನಡೆದಿದೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನವರಾದ ಡಾ. ದಿನೇಶ್ ಲಕ್ಷ್ಮಣ ಭಟ್ಕಳ (79) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕಳೆದ ಹಲವು ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದ ಅವರು, ಸದ್ಯ ಬೆಳಗಾವಿಯಲ್ಲಿ ನೆಲೆಸಿದ್ದರು. ಶುಕ್ರವಾರ ಬೆಳಿಗ್ಗೆ ತಮ್ಮ ಮನೆಯ ಬಾಲ್ಕನಿಯಲ್ಲಿ ಡಾ. ಭಟ್ಕಳ ಅವರು ತಾವೇ ತಮ್ಮ ಮೇಲೆ ಗುಂಡು ಹಾರಿಸಿಕೊಂಡಿದ್ದಾರೆ. ಗುಂಡಿನ ಶಬ್ದ ಕೇಳಿ ಮನೆಯವರು ಹಾಗೂ ಸ್ಥಳೀಯರು ಧಾವಿಸಿದಾಗ ಘಟನೆ ಬೆಳಕಿಗೆ ಬಂದಿದ್ದು, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಸಮಾಜದಲ್ಲಿ ಅತ್ಯಂತ ಸರಳ ಮತ್ತು ಸ್ನೇಹಪರ ವ್ಯಕ್ತಿತ್ವ ಹೊಂದಿದ್ದ ಅವರ ಈ ಹಠಾತ್ ನಿರ್ಧಾರ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಡಾ. ದಿನೇಶ್ ಭಟ್ಕಳ ಅವರು ಇತ್ತೀಚೆಗೆ ಶ್ವಾಸಕೋಶದ ಕ್ಯಾನ್ಸರ್’ನಿಂದ ಬಳಲುತ್ತಿದ್ದರು. ಅನಾರೋಗ್ಯ ಹಾಗೂ ಅದರ ತೀವ್ರ ನೋವನ್ನು ತಾಳಲಾರದೆ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅವರು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ. ತಾವು ಈ ಕಠಿಣ ನಿರ್ಧಾರ ತೆಗೆದುಕೊಳ್ಳುವ ಮುನ್ನ ತಮಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೇ “ನೋವು ತಾಳಲಾರದೇ ನಾನು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ” ಎಂದು ಮೊಬೈಲ್‌ನಲ್ಲಿ ಸಂದೇಶ ಕಳುಹಿಸಿದ್ದರು ಎಂದು ಸಮಾಜಸೇವಕ ವಿಜಯ್ ಮೋರೆ ಮಾಹಿತಿ ನೀಡಿದ್ದಾರೆ.

ಭಟ್ಕಳ ಅವರು ಬೆಳಗಾವಿಯ ಪ್ರತಿಷ್ಠಿತ ಕೆ.ಎಲ್.ಇ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಸುಮಾರು 40 ವರ್ಷಗಳ ಕಾಲ ಸುದೀರ್ಘ ವೈದ್ಯಕೀಯ ಸೇವೆ ಸಲ್ಲಿಸಿದ್ದರು. ಅಲ್ಲದೆ ಅಂಕೋಲಾದ ಕೆ.ಎಲ್.ಇ ಆಸ್ಪತ್ರೆಯಲ್ಲಿ ಆಡಳಿತಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಘಟನಾ ಸ್ಥಳಕ್ಕೆ ಟಿಳಕವಾಡಿ ಠಾಣೆಯ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಎಫ್.ಎಸ್.ಎಲ್ (FSL) ತಂಡ ಕೂಡ ಆಗಮಿಸಿದ್ದು, ಪಂಚನಾಮೆ ಪ್ರಕ್ರಿಯೆ ಮುಂದುವರಿದಿದೆ ಎಂದು ಡಿಸಿಪಿ ನಾರಾಯಣ್ ಬರಮನಿ ತಿಳಿಸಿದ್ದಾರೆ. ಬೈಟ್
ತನಿಖೆಯ ನಂತರವಷ್ಟೇ ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ಸ್ಪಷ್ಟವಾಗಬೇಕಿದೆ.

Tags:

error: Content is protected !!