ವಿಪತ್ತು ನಿರ್ವಹಣೆ ದಳದ ಸಿಪಿಐ ಆಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಶೈಲ ಚೌಗಲೆ ಅವರು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ರಾಣಿ ಚೆನ್ನಮ್ಮ ನಗರದಲ್ಲಿ ನಡೆದಿದೆ. ಸದ್ಯದಲ್ಲೇ ಡಿಎಸ್ಪಿ ಆಗಿ ಪದೋನ್ನತಿ ಪಡೆಯಬೇಕಿದ್ದ ದಕ್ಷ ಅಧಿಕಾರಿಯ ಆತ್ಮಹತ್ಯೆಗೆ ಶರಣಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಬೆಳಗಾವಿಯ ರಾಣಿ ಚನ್ನಮ್ಮ ನಗರದ ನಿವಾಸದಲ್ಲಿ ಸಿಪಿಐ ಶ್ರೀಶೈಲ ಚೌಗಲೆ (37) ಅವರು ರೂಮ್ ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪತ್ನಿ ತಕ್ಷಣವೇ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಅಧೀನ ಸಿಬ್ಬಂದಿ ರೂಮ್ ಬಾಗಿಲು ಮುರಿದು ಶ್ರೀಶೈಲ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಪ್ರಯೋಜನವಾಗಲಿಲ್ಲ. ಮೃತ ಅಧಿಕಾರಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿದೆ. ಘಟನೆಗೆ ಸಂಬಂಧಿಸಿದಂತೆ ಬೆಳಗಾವಿಯ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಟೆನ್ಷನ್ ಟೆನ್ಷನ್ ಎಂದು ಮಾತ್ರ ಹೇಳುತ್ತಿದ್ದರು. ಅತ್ಯಂತ ಒಳ್ಳೆಯ ಸ್ವಭಾವವನ್ನು ಹೊಂದಿದವರಾಗಿದ್ದರು. ಅವರಿಗೆ ಒಂದು ಹೆಣ್ಣು ಒಂದು ಗಂಡು ಮಗುವಿದೆ. ರಾತ್ರಿ 9 ಗಂಟೆಗೆ ಫೋನ್’ನಲ್ಲಿ ಮಾತನಾಡಿದ್ದಾರೆ. ಆನಂತರ ಈ ನಿರ್ಣಯ ಕೈಗೊಂಡಿದ್ದಾರೆ ಎಂದು ಮೃತರ ಸಂಬಂಧಿ ರಮೇಶ್ ಪಾಟೀಲ್ ತಿಳಿಸಿದರು.

ಶ್ರೀಶೈಲ್ ತಮ್ಮ ಇಲಾಖೆಯಲ್ಲಿಯೂ ಪ್ರಾಮಾಣಿಕ ಕಾರ್ಯ ನಿರ್ವಹಿಸುತ್ತಿದ್ದರು. ಎಲ್ಲರಿಗೂ ಸಹಾಯ ಮಾಡುತ್ತಿದೆ. ಗ್ರಾಮದಲ್ಲಿಯೂ ಅತ್ಯಂತ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದರು. ಸದ್ಯದಲ್ಲೇ ಡಿ ಎಸ್ ಪಿ ಎಂದು ಪದೋನ್ನತಿ ಇತ್ತು. ಅಷ್ಟರಲ್ಲೇ ಈ ಘಟನೆ ನಡೆದು ಹೋಗಿದೆ ಎಂದು ಮಹೇಶ್ ಚೌಗುಲೆ ಹೇಳಿದರು.
ಶವಾಗಾರದ ಎದುರು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
