• ಬೆಳಗಾವಿ ಜನತೆಗೆ ಬಿಸಿಲಿನಿಂದ ಭರ್ಜರಿ ಮುಕ್ತಿ
• ರಾಣಿ ಚೆನ್ನಮ್ಮ ವೃತ್ತದಲ್ಲಿ ಕೂಲಿಂಗ್ ಟೆಂಟ್
• ಡಿಸಿ ಮತ್ತು ಕಮಿಷನರ್ ಕಾರ್ಯಕ್ಕೆ ಶ್ಲಾಘನೆ
• ಟ್ರಾಫಿಕ್ ಸಿಗ್ನಲ್ನಲ್ಲಿ ಸವಾರರಿಗೆ ತಂಪು ನೆರಳು

ಬಿಸಿಲ ನಾಡಾಗಿ ಮಾರ್ಪಡುತ್ತಿರುವ ಬೆಳಗಾವಿಯಲ್ಲಿ ವಾಹನ ಸವಾರರಿಗೆ ಈಗ ಬಿಗ್ ರಿಲೀಫ್ ಸಿಕ್ಕಿದೆ. ಟ್ರಾಫಿಕ್ ಸಿಗ್ನಲ್ಗಳಲ್ಲಿ ಸೂರ್ಯನ ಶಾಖಕ್ಕೆ ತತ್ತರಿಸುತ್ತಿದ್ದ ಜನರಿಗಾಗಿ ಜಿಲ್ಲಾಡಳಿತವು ವಿಜಯಪುರ ಮಾದರಿಯ ‘ಕೂಲಿಂಗ್ ಟೆಂಟ್’ ವ್ಯವಸ್ಥೆ ಮಾಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಬಡವರ ಮಹಾಬಳೇಶ್ವರ ಎಂದೇ ಖ್ಯಾತಿ ಪಡೆದಿದ್ದ ಕುಂದಾನಗರಿ ಬೆಳಗಾವಿಯಲ್ಲಿ ಈ ಬಾರಿ ಬಿಸಿಲಿನ ತಾಪಮಾನ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಅದರಲ್ಲೂ ನಗರದ ಪ್ರಮುಖ ಕೇಂದ್ರವಾದ ರಾಣಿ ಚೆನ್ನಮ್ಮ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಬಿದ್ದಾಗ ಸವಾರರು ತಲೆ ಸುಡುವ ಬಿಸಿಲಿಗೆ ಹೈರಾಣಾಗುತ್ತಿದ್ದರು. ಜನರ ಈ ಸಂಕಷ್ಟವನ್ನು ಮನಗಂಡ ಬೆಳಗಾವಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ವಿಜಯಪುರದ ಮಾದರಿಯಲ್ಲಿ ವೃತ್ತದ ಸುತ್ತಲೂ ಭವ್ಯವಾದ ಟೆಂಟ್ ವ್ಯವಸ್ಥೆ ಮಾಡಿದೆ.
ಈ ಮಹತ್ಕಾರ್ಯದ ಹಿಂದೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಪೊಲೀಸ್ ಆಯುಕ್ತರಾದ ಕಾರ್ತಿಕ್ ಎಂ. ಅವರ ವಿಶೇಷ ಶ್ರಮವಿದೆ. ಸಿಗ್ನಲ್ ಕಾಯುವ ಸಂದರ್ಭದಲ್ಲಿ ಸವಾರರಿಗೆ ನೆರಳು ನೀಡುವ ಉದ್ದೇಶದಿಂದ ನಿರ್ಮಿಸಲಾದ ಈ ಟೆಂಟ್ಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ಪಡೆಯುತ್ತಿವೆ. ಅಧಿಕಾರಿಗಳ ಈ ಜನಪರ ಕಾಳಜಿಗೆ ಬೆಳಗಾವಿ ಜನತೆ ಫಿದಾ ಆಗಿದ್ದು, ಹಿರಿಯ ಅಧಿಕಾರಿಗಳ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.
ಇದೇ ವೇಳೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಒಂದು ಮನವಿಯನ್ನೂ ಮುಂದಿಟ್ಟಿದ್ದಾರೆ. ಬಿಸಿಲಿನ ತಾಪಕ್ಕೆ ಕೇವಲ ನೆರಳು ಮಾತ್ರವಲ್ಲದೆ, ಟ್ರಾಫಿಕ್ ಪಾಯಿಂಟ್ಗಳ ಸಮೀಪ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿದರೆ ಜನರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಒಟ್ಟಿನಲ್ಲಿ ಕಾಯುತ್ತಿರುವ ಸವಾರರಿಗೆ ಈ ಹಸಿರು ಟೆಂಟ್ಗಳು ಸುಡುವ ಬಿಸಿಲಿನಲ್ಲಿ ತಂಪು ಅನುಭವ ನೀಡುತ್ತಿರುವುದಂತೂ ಸತ್ಯ.
