Belagavi

ಬೆಳಗಾವಿ ಪೊಲೀಸರ ಬಿಗಿ ಕಾರ್ಯಾಚರಣೆ: ಮಟಕಾ, ಜೂಜಾಟ ಹಾಗೂ ಗಾಂಜಾ ವ್ಯಸನಿಗಳ ಮೇಲೆ ದಾಳಿ

Share

• ಬೆಳಗಾವಿ ಪೊಲೀಸರಿಂದ ಅಕ್ರಮ ಚಟುವಟಿಕೆಗಳ ಮೇಲೆ ದಾಳಿ
• ಮಟಕಾ ಮತ್ತು ಜೂಜಾಟದ ಅಡ್ಡೆಗಳು ಧ್ವಂಸ
• ಬಂಧಿತರಿಂದ ನಗದು ಹಾಗೂ ಸಾಮಗ್ರಿಗಳ ಜಪ್ತಿ
• ಗಾಂಜಾ ವ್ಯಸನಿಯ ವಿರುದ್ಧ ಕಠಿಣ ಕಾನೂನು ಕ್ರಮ

ಬೆಳಗಾವಿ ನಗರದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಖಡೇಬಜಾರ, ಮಾರ್ಕೆಟ್ ಹಾಗೂ ಮಾಳಮಾರುತಿ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಮಿಂಚಿನ ದಾಳಿಯಲ್ಲಿ ಮಟಕಾ ಬುಕ್ಕಿಗಳು, ಜೂಜುಕೋರರು ಹಾಗೂ ಗಾಂಜಾ ಸೇವನೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಖಡೇಬಜಾರ ಪೊಲೀಸ್ ಠಾಣೆಯ ಪಿಎಸ್‌ಐ ಎ. ವೈ. ಅದಗೊಂಡ ನೇತೃತ್ವದ ತಂಡ ಛತ್ರಪತಿ ಶಿವಾಜಿ ರೋಡ್ ನಾಲಾ ಬಳಿ ದಾಳಿ ನಡೆಸಿ, ಸಾರ್ವಜನಿಕವಾಗಿ ಮಟಕಾ ಆಟವಾಡಿಸುತ್ತಿದ್ದ ಪರುಶರಾಮ ಮಿನಾಜಿ ಮೋರೆ ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈತ ಹಣವನ್ನು ಗಜಾನನ ಗರಡೆ ಎಂಬುವವನಿಗೆ ನೀಡುತ್ತಿರುವುದಾಗಿ ತಿಳಿಸಿದ್ದು, ಇಬ್ಬರ ವಿರುದ್ಧವೂ ಕೆ.ಪಿ. ಕಾಯ್ದೆಯಡಿ ಕೇಸ್ ದಾಖಲಾಗಿದೆ. ಇನ್ನೊಂದೆಡೆ, ಮಾರ್ಕೆಟ್ ಠಾಣೆಯ ಪಿಎಸ್‌ಐ ವಿಠಲ ಹಾವನ್ನವರ ತಂಡವು ವೀರಭದ್ರ ನಗರದಲ್ಲಿ ಇಸ್ಪೀಟ್ ಜೂಜಾಟದ ಅಡ್ಡೆಯ ಮೇಲೆ ದಾಳಿ ನಡೆಸಿತು. ಈ ವೇಳೆ ಮೋಶಿನಖಾನ ಮುನಿರಖಾನ ಪಠಾಣ, ಶೋಹಲ ಮನ್ಸೂರ ಮಕಾನದಾರ, ಹರೂನರತೀದ ರಾಜೇಸಾಬ ತಿಗಡಿ, ಜಾಫರಸಾಧಿಕ ಇಮ್ಮಿಯಾಟ ಘೀವಾಲೆ, ಮೊಹಮ್ಮದರಶಿದ ಮಹಮ್ಮದನಮ ಬೇಪಾರಿ ಎಂಬುವವರನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತೊಬ್ಬ ಆರೋಪಿ ಜಾಫರ ಮೀರಾಸಾಬ ಸನದಿ ಪರಾರಿಯಾಗಿದ್ದಾನೆ.
ಹಾಗೆಯೇ, ಮಾಳಮಾರುತಿ ಠಾಣೆಯ ಪಿಎಸ್‌ಐ ಉದಯ ಪಾಟೀಲ ಅವರು ಮಹಾಂತೇಶ ನಗರದಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ಶ್ರೀಕಾಂತ ಮುರಗಪ್ಪ ಯಕ್ಕುಂಡಿ ಎಂಬಾತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಎಲ್ಲಾ ಯಶಸ್ವಿ ಕಾರ್ಯಾಚರಣೆಗಳನ್ನು ಬೆಳಗಾವಿ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಯವರು ಶ್ಲಾಘಿಸಿದ್ದಾರೆ.

Tags:

error: Content is protected !!