• ಛತ್ರಪತಿ ಶಿವಾಜಿ ಉದ್ಯಾನವನದಲ್ಲಿ ಸ್ವಚ್ಛತೆ ಕಾಪಾಡಲು ಆಗ್ರಹ
• ಧೂಮಪಾನಿಗಳಿಂದ ಸಾರ್ವಜನಿಕರಿಗೆ ಮುಜುಗರದ ವಾತಾವರಣ
• ಬೀದಿ ನಾಯಿಗಳ ಹಾವಳಿ ತಡೆಯಲು ಮನವಿ
• ಸಿಸಿ ಕ್ಯಾಮೆರಾ ಹಾಗೂ ಪೊಲೀಸ್ ಗಸ್ತಿಗೆ ಒತ್ತಾಯ

ಬೆಳಗಾವಿಯ ಶಹಾಪುರದಲ್ಲಿರುವ ಐತಿಹಾಸಿಕ ಛತ್ರಪತಿ ಶಿವಾಜಿ ಮಹಾರಾಜ್ ಉದ್ಯಾನವನ ಇದೀಗ ಸಮಸ್ಯೆಗಳ ಆಗರವಾಗಿದೆ. ಸ್ವಚ್ಛತೆ ಹಾಗೂ ಭದ್ರತೆಯ ಕೊರತೆಯಿಂದ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಗಳನ್ನು ನೀಗಿಸುವಂತೆ ಆಗ್ರಹಿಸಿ ವೀರ ಮದಕರಿ ಘರ್ಜನೆ ಸಂಘಟನೆಯು ಇಂದು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿತು.
ಬೆಳಗಾವಿ ಶಹಾಪುರದ ಡಾ.ಶ್ಯಾಮಾ ಪ್ರಸಾದ ಮುಖರ್ಜಿ ರಸ್ತೆಯಲ್ಲಿರುವ ಛತ್ರಪತಿ ಶಿವಾಜೀ ಮಹಾರಾಜ್ ಉದ್ಯಾನವನಕ್ಕೆ ಪ್ರತಿದಿನ ನೂರಾರು ಜನರು ವಾಯು ವಿಹಾರಕ್ಕಾಗಿ ಆಗಮಿಸುತ್ತಾರೆ. ಆದರೆ ಇಲ್ಲಿ ಇತ್ತೀಚಿನ ದಿನಗಳಲ್ಲಿ ಸ್ವಚ್ಛತೆಯ ಕೊರತೆ ಕಾಡುತ್ತಿದ್ದು, ಭದ್ರತೆಯ ಸಮಸ್ಯೆಯೂ ತಲೆದೋರಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ವೀರ ಮದಕರಿ ಘರ್ಜನೆ ಸಂಘಟನೆಯ ರಾಜ್ಯಾಧ್ಯಕ್ಷರಾದ ಆನಂದ ಶಿರೂರ ಅವರ ನೇತೃತ್ವದಲ್ಲಿ ಬುಧವಾರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿ, ಶೀಘ್ರ ಕ್ರಮಕ್ಕೆ ಒತ್ತಾಯಿಸಲಾಯಿತು.

ಸಂಜೆ ವೇಳೆ ಉದ್ಯಾನವನಕ್ಕೆ ಬರುವ ಕೆಲವರು ತಿಂಡಿ ತಿನಿಸುಗಳನ್ನು ತಿಂದು ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಅಷ್ಟೇ ಅಲ್ಲದೆ, ಕೆಲವರು ಸಾರ್ವಜನಿಕ ಸ್ಥಳದಲ್ಲಿಯೇ ಧೂಮಪಾನ ಮಾಡುತ್ತಿರುವುದರಿಂದ ಮಕ್ಕಳು ಹಾಗೂ ಮಹಿಳೆಯರು ವಾಯು ವಿಹಾರ ಮಾಡಲು ಮುಜುಗರ ಪಡುವಂತಾಗಿದೆ. ಇದರ ಜೊತೆಗೆ ಉದ್ಯಾನವನದಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚು ಬೀದಿ ನಾಯಿಗಳ ಕಾಟವಿದ್ದು, ಆಟವಾಡುವ ಮಕ್ಕಳಿಗೆ ಕಚ್ಚಲು ಬರುತ್ತಿವೆ. ಇದರಿಂದ ಸಾರ್ವಜನಿಕರ ಸುರಕ್ಷತೆ ಪ್ರಶ್ನೆಯಾಗಿದೆ ಎಂದು ಆನಂದ ಶಿರೂರ ದೂರಿದರು.
ಉದ್ಯಾನವನದಲ್ಲಿ ಧೂಮಪಾನ ನಿಷೇಧದ ಫಲಕ ಅಳವಡಿಸುವುದು, ಸಿಸಿ ಕ್ಯಾಮೆರಾ ಅಳವಡಿಕೆ, ಹೆಚ್ಚಿನ ವಿದ್ಯುತ್ ದೀಪದ ವ್ಯವಸ್ಥೆ ಹಾಗೂ ಸಂಜೆ ವೇಳೆ ಪೊಲೀಸ್ ಗಸ್ತು ತಿರುಗಿಸುವಂತೆ ಸಂಘಟನೆ ಆಗ್ರಹಿಸಿದೆ. ಬೈಟ್
ಬೇಡಿಕೆಗಳನ್ನು ಆಲಿಸಿದ ಪಾಲಿಕೆ ಆಯುಕ್ತರು ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಪ್ರಮುಖರಾದ ವಿಜಯ ತಳವಾರ, ಬಲರಾಮ ಮಾಸೆನಟ್ಟಿ, ದತ್ತಾ ಬಿಲಾವರ, ಡಾ. ಉತ್ತಮ ಪಾಟೀಲ, ಮಂಜು ಕಾಂಬ್ಳೆ, ಆಕಾಶ್ ಧಾಮನೇಕರ, ರೂತುಜಾ ಶಿರೂರ, ರೇಣುಕಾ ಹೊಸೂರ, ಸೀಮಾ ಪವಾರ್ ಹಾಗೂ ವೈಶಾಲಿ ಸುತಾರ ಉಪಸ್ಥಿತರಿದ್ದರು.
