ಬೆಳಗಾವಿ: ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ – 48 ಮಂದಿಗೆ ಬಿದ್ದಿತು ದಂಡದ ಬಿಸಿ
• ಶಹಾಪುರದಲ್ಲಿ ತಂಬಾಕು ನಿಯಂತ್ರಣ ಕೋಶ ದಾಳಿ
• ಕೋಟ್ಪಾ ಕಾಯ್ದೆಯಡಿ ಒಟ್ಟು 48 ಪ್ರಕರಣ ದಾಖಲು
• ಶಾಲಾ ಆವರಣದ ಬಳಿ ತಂಬಾಕು ಮಾರಾಟಕ್ಕೆ ಬ್ರೇಕ್
• ನಿಯಮ ಉಲ್ಲಂಘಿಸಿದ ಅಂಗಡಿ ಮಾಲೀಕರಿಗೆ ದಂಡ

ಬೆಳಗಾವಿ ನಗರದ ಶಹಾಪುರ ಪ್ರದೇಶದಲ್ಲಿಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆ ಭರ್ಜರಿ ಬೇಟೆಯಾಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರು ಹಾಗೂ ನಿಯಮ ಮೀರಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದವರ ಮೇಲೆ ಕೋಟ್ಪಾ (COTPA) ಕಾಯ್ದೆಯಡಿ ದಾಳಿ ನಡೆಸಿ ದಂಡ ವಿಧಿಸಲಾಯಿತು.
ಬೆಳಗಾವಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಇಂದು ನಗರದ ಶಹಾಪುರ ವ್ಯಾಪ್ತಿಯಲ್ಲಿ ‘ಕೋಟ್ಪಾ-2003’ ಕಾಯ್ದೆಯಡಿ ವಿಶೇಷ ಜಾಗೃತಿ ಹಾಗೂ ದಾಳಿ ಹಮ್ಮಿಕೊಳ್ಳಲಾಯಿತು. ಜಿಲ್ಲಾ ಜಾರಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದವರು ಮತ್ತು ಶೈಕ್ಷಣಿಕ ಸಂಸ್ಥೆಗಳ 100 ಮೀಟರ್ ಅಂತರದೊಳಗೆ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಲಾಯಿತು.
ಕಾರ್ಯಾಚರಣೆಯ ವೇಳೆ ಒಟ್ಟು 48 ಪ್ರಕರಣಗಳನ್ನು ದಾಖಲಿಸಿ ದಂಡ ವಸೂಲಿ ಮಾಡಲಾಯಿತು. ಕೇವಲ ದಂಡ ವಿಧಿಸುವುದು ಮಾತ್ರವಲ್ಲದೆ, ತಂಬಾಕು ಸೇವನೆಯಿಂದ ಉಂಟಾಗುವ ಕ್ಯಾನ್ಸರ್ನಂತಹ ಭೀಕರ ಕಾಯಿಲೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಈ ದಾಳಿಯಲ್ಲಿ ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕರಾದ ಮಹಾಂತೇಶ ಉಳ್ಳಾಗಡ್ಡಿ, ಸಮಾಜ ಸೇವಕಿ ಕವಿತಾ ರಾಜಣ್ಣವರ, ಆರೋಗ್ಯ ಕೇಂದ್ರದ ಸತೀಶ ಸಜ್ಜನ ಹಾಗೂ ಪೊಲೀಸ್ ಅಧಿಕಾರಿ ವಿಠ್ಠಲ ಬಿದರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

