BELAGAVI

ಬೆಳಗಾವಿ ಕಸಾಪದಲ್ಲಿ ಕೋಟಿ ಕೋಟಿ ಹಗರಣದ ಆರೋಪ:

Share

ಗಡಿ ಜಿಲ್ಲೆ ಬೆಳಗಾವಿಯ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಕೋಟಿ ಕೋಟಿ ರೂಪಾಯಿ ಮೌಲ್ಯದ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಇಡೀ ಸಾಹಿತ್ಯ ವಲಯ ತಲ್ಲಣಗೊಂಡಿದೆ. ಸರ್ಕಾರದ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ನಿರ್ಮಾಣವಾದ ಭವ್ಯ ‘ಕನ್ನಡ ಭವನ’ವನ್ನು ಕೇಂದ್ರ ಪರಿಷತ್ತಿನ ಗಮನಕ್ಕೆ ತರದೆ ಖಾಸಗಿ ಸಂಘಟನೆಗೆ ಹಸ್ತಾಂತರಿಸಿದ ಗಂಭೀರ ಆರೋಪದಡಿ, ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರಿಗೆ ರಾಜ್ಯ ಕಸಾಪ ಆಡಳಿತಾಧಿಕಾರಿ ಕೆ.ಎ. ದಯಾನಂದ್ ಅವರು ಸುದೀರ್ಘ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸುಮಾರು ೫.೪೫ ಕೋಟಿ ರೂಪಾಯಿ ಸರ್ಕಾರಿ ಅನುದಾನದಲ್ಲಿ ಬೆಳಗಾವಿಯಲ್ಲಿ ಸಾಹಿತ್ಯಿಕ ಚಟುವಟಿಕೆಗಳಿಗಾಗಿ ಭವ್ಯ ಕನ್ನಡ ಭವನವನ್ನು ನಿರ್ಮಿಸಲಾಗಿತ್ತು. ಆದರೆ, ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರು ಕಸಾಪ ನಿಯಮಾವಳಿಗಳು ಹಾಗೂ ಕರಾರಿನ ಷರತ್ತುಗಳನ್ನು ಗಾಳಿಗೆ ತೂರಿ, ಈ ಭವನವನ್ನು ‘ಕನ್ನಡ ಸಾಂಸ್ಕೃತಿಕ ಭವನ ಕ್ಷೇಮಾಭಿವೃದ್ಧಿ ಸಂಘ’ ಎಂಬ ಖಾಸಗಿ ಸಂಸ್ಥೆಗೆ ಅನಧಿಕೃತವಾಗಿ ಹಸ್ತಾಂತರಿಸಿದ್ದಾರೆ ಎಂಬ ದೂರು ಕೇಳಿಬಂದಿದೆ. ಈ ಭವನದಲ್ಲಿರುವ ವಾಣಿಜ್ಯ ಮಳಿಗೆಗಳಿಂದ ಬರುತ್ತಿರುವ ಮಾಸಿಕ ೨ ಲಕ್ಷ ರೂಪಾಯಿ ಬಾಡಿಗೆ ಹಣವು ಕಸಾಪ ಖಾತೆಗೆ ಸೇರದೆ ಖಾಸಗಿ ಸಂಘದ ಪಾಲಾಗುತ್ತಿದ್ದು, ಇದರಿಂದ ಪರಿಷತ್ತಿಗೆ ಭಾರಿ ಆರ್ಥಿಕ ನಷ್ಟವುಂಟಾಗಿದೆ.

ಅಷ್ಟೇ ಅಲ್ಲದೆ, ೨೦೦೬ ರಿಂದ ಇಂದಿನವರೆಗೂ ಜಾಗದ ಬಾಡಿಗೆ ಹಣ ಭರಣ ಮಾಡದೆ ಮತ್ತು ಮಹಾನಗರ ಪಾಲಿಕೆಗೆ ಆಸ್ತಿ ತೆರಿಗೆಯನ್ನೂ ಪಾವತಿಸದೆ ನಿಯಮ ಉಲ್ಲಂಘಿಸಿರುವುದು ಒಂಬತ್ತಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ನೀಡಿದ ದೂರಿನಿಂದ ಬೆಳಕಿಗೆ ಬಂದಿದೆ. ಈ ಗಂಭೀರ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಈಗಾಗಲೇ ಎರಡು ಬಾರಿ ಕಾರಣ ಕೇಳಿ ನೋಟಿಸ್ ನೀಡಿದ್ದರೂ ಯಾವುದೇ ಸಮಜಾಯಿಷಿ ನೀಡದ ಹಿನ್ನೆಲೆಯಲ್ಲಿ, ಪಾಲಿಕೆ ಆಯುಕ್ತರು ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇದೀಗ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿ ಕೆ.ಎ. ದಯಾನಂದ್ ಅವರು, ಜಿಲ್ಲಾಧ್ಯಕ್ಷರ ನಡೆ ಪರಿಷತ್ತಿನ ಘನತೆ ಮತ್ತು ಧೈಯೋದ್ದೇಶಗಳಿಗೆ ಕಪ್ಪುಚುಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಷತ್ತಿನ ನಿಬಂಧನೆ ಸಂಖ್ಯೆ ೭ (೮) ರ ಅಡಿಯಲ್ಲಿ ನಿಮ್ಮ ವಿರುದ್ಧ ಏಕೆ ಶಿಸ್ತುಕ್ರಮ ಕೈಗೊಳ್ಳಬಾರದು ಮತ್ತು ಪೊಲೀಸ್ ಠಾಣೆಯಲ್ಲಿ ಏಕೆ ಕ್ರಿಮಿನಲ್ ಮೊಕದ್ದಮೆ ಹೂಡಬಾರದು ಎಂದು ಪ್ರಶ್ನಿಸಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು, ಪತ್ರ ತಲುಪಿದ ೭ ದಿನಗಳ ಒಳಗಾಗಿ ಲಿಖಿತ ಉತ್ತರ ನೀಡುವಂತೆ ಕಟ್ಟುನಿಟ್ಟಿನ ಗಡುವು ವಿಧಿಸಿದೆ. ತಪ್ಪಿದಲ್ಲಿ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

Tags:

error: Content is protected !!