Belagavi

ಬೆಳಗಾವಿ ‘ಕೈ’ ಪಡೆಯಲ್ಲಿ ಮಂತ್ರಿಗಿರಿ ಫೈಟ್: ಕುಂದಾನಗರಿಯ ಪಂಚರತ್ನಗಳ ನಡುವೆ ಶುರುವಾಯ್ತು ಮಹಾಯುದ್ಧ!

Share

1. ಮಂತ್ರಿಗಿರಿ ಪೈಪೋಟಿಯಲ್ಲಿ ಬೆಳಗಾವಿಯ ಪಂಚ ಶಾಸಕರು
2. ಸವದಿ ಮತ್ತು ಪಟ್ಟಣ ನಡುವೆ ಬಿರುಸಿನ ಕಸರತ್ತು
3. ನಿಷ್ಠಾವಂತ ಹುಕ್ಕೇರಿ ಮತ್ತು ಕೌಜಲಗಿಗೆ ಒಲಿಯುತ್ತಾ ಅದೃಷ್ಟ?
4. ಅಲ್ಪಸಂಖ್ಯಾತ ಕೋಟಾದಲ್ಲಿ ಸಚಿವ ಸ್ಥಾನಕ್ಕೆ ಆಸೀಫ್ ಸೇಠ್ ಲಾಬಿ

ರಾಜ್ಯ ರಾಜಕೀಯದ ಶಕ್ತಿ ಕೇಂದ್ರ ಬೆಳಗಾವಿಯಲ್ಲಿ ಈಗ ಮಂತ್ರಿಗಿರಿಗಾಗಿ ಬಿಗ್ ಫೈಟ್ ಶುರುವಾಗಿದೆ. ಜಿಲ್ಲೆಯ ಐವರು ಪ್ರಭಾವಿ ಶಾಸಕರು ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದು, ಯಾರ ಕೊರಳಿಗೆ ಮಂತ್ರಿ ಪದವಿ ಬೀಳಲಿದೆ ಎಂಬ ಕುತೂಹಲ ಇಡೀ ರಾಜ್ಯದ ಕಣ್ಣು ಬೆಳಗಾವಿಯತ್ತ ತಿರುಗುವಂತೆ ಮಾಡಿದೆ.
ಬೆಳಗಾವಿ ಜಿಲ್ಲೆಯಲ್ಲಿ ಈಗ ಸಚಿವ ಸಂಪುಟದ ಸರ್ಕಸ್ ತಾರಕಕ್ಕೇರಿದೆ. ಈಗಾಗಲೇ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ್ ಸಚಿವ ಸಂಪುಟದಲ್ಲಿದ್ದರೂ, ಜಿಲ್ಲೆಗೆ ಮತ್ತೊಂದು ಸ್ಥಾನ ಬೇಕೆಂಬ ಪಟ್ಟು ಬಲವಾಗಿದೆ. ಪ್ರಮುಖವಾಗಿ ಲಿಂಗಾಯತ ಸಮುದಾಯದ ನಾಲ್ವರು ಮತ್ತು ಒಬ್ಬರು ಅಲ್ಪಸಂಖ್ಯಾತ ಶಾಸಕರು ಮಂತ್ರಿಗಿರಿಯ ರೇಸ್‌ನಲ್ಲಿದ್ದಾರೆ. ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದಾಗ ವರಿಷ್ಠರು ನೀಡಿದ್ದ ಭರವಸೆಯ ಮೇಲೆ ಲಕ್ಷ್ಮಣ ಸವದಿ ಕಣ್ಣಿಟ್ಟಿದ್ದರೆ, ಮುಖ್ಯಮಂತ್ರಿಗಳ ಆಪ್ತರಾಗಿರುವ ಅಶೋಕ ಪಟ್ಟಣ ತಮಗೆ ಸಚಿವ ಸ್ಥಾನ ಫಿಕ್ಸ್ ಎಂಬ ವಿಶ್ವಾಸದಲ್ಲಿದ್ದಾರೆ. ಮತ್ತೊಂದೆಡೆ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಹಾಗೂ ಆಪರೇಷನ್ ಕಮಲದ ಆಮಿಷಕ್ಕೆ ಬಲಿಯಾಗದ ನಿಷ್ಠಾವಂತ ಗಣೇಶ ಹುಕ್ಕೇರಿ ಕೂಡ ತಮ್ಮ ಹಕ್ಕು ಮಂಡಿಸುತ್ತಿದ್ದಾರೆ.
ಇವರ ನಡುವೆ ಉತ್ತರ ಕರ್ನಾಟಕದ ಏಕೈಕ ಅಲ್ಪಸಂಖ್ಯಾತ ಶಾಸಕ ಎಂಬ ಬಲದೊಂದಿಗೆ ಆಸೀಫ್ ಸೇಠ್ ಕೂಡ ಪೈಪೋಟಿಗಿಳಿದಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಗೆ ಐದು ಸಚಿವ ಸ್ಥಾನಗಳಿದ್ದ ಇತಿಹಾಸವಿದ್ದು, ಈಗ ಕಾಂಗ್ರೆಸ್ ಹೈಕಮಾಂಡ್ ಬೆಳಗಾವಿಯ ಈ ಪಂಚರತ್ನಗಳಲ್ಲಿ ಯಾರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ದೆಹಲಿ ಮಟ್ಟದಲ್ಲಿ ನಡೆಯುತ್ತಿರುವ ಈ ಲಾಬಿ ಯಾರ ಪರವಾಗಿ ಫಲ ನೀಡಲಿದೆ ಎಂಬುದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ.

Tags:

error: Content is protected !!