• ರಾಜ್ಯಮಟ್ಟದ ಪಿಯು ಫಲಿತಾಂಶದಲ್ಲಿ ಕೆಎಲ್ಇ ಹವಾ
• ಸಂಸ್ಥೆಯ ಪಾಲಾದ ರಾಜ್ಯಮಟ್ಟದ 27 ರಾಂಕ್ಗಳು
• 1007 ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ‘ಸೆಂಟಮ್’
• JEE ಅಡ್ವಾನ್ಸ್ಡ್ ಪರೀಕ್ಷೆಗೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಹ

ಬೆಳಗಾವಿಯ ಹೆಮ್ಮೆಯ ಕೆಎಲ್ಇ ಸಂಸ್ಥೆ ಮತ್ತೊಮ್ಮೆ ತನ್ನ ಶೈಕ್ಷಣಿಕ ಗುಣಮಟ್ಟವನ್ನು ಸಾಬೀತುಪಡಿಸಿದೆ. ಗ್ರಾಮೀಣ ಮತ್ತು ನಗರ ಭಾಗದ ವಿದ್ಯಾರ್ಥಿಗಳನ್ನು ಜಾಗತಿಕ ಮಟ್ಟಕ್ಕೆ ಸಜ್ಜುಗೊಳಿಸುತ್ತಿರುವ ಕೆಎಲ್ಇ ಪಿಯು ಕಾಲೇಜುಗಳು, ಈ ವರ್ಷದ ಫಲಿತಾಂಶದಲ್ಲಿ ಅಸಾಧಾರಣ ಸಾಧನೆ ಮಾಡಿದೆ ಎಂದು ಕೆ.ಎಲ್.ಇ ಸಂಸ್ಥೆಯ ಅಧ್ಯಕ್ಷ ಅಮೀತ್ ಕೋರೆ ಅವರು ಹೇಳಿದರು.
ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದರು. ಸಪ್ತರ್ಷಿಗಳ ತ್ಯಾಗದಿಂದ ಬೆಳೆದು ನಿಂತಿರುವ ಕೆಎಲ್ಇ ಸಂಸ್ಥೆಯು 2025-26ನೇ ಸಾಲಿನ ಪದವಿಪೂರ್ವ ಪರೀಕ್ಷೆಯಲ್ಲಿ ಶೇ. 95.93ರಷ್ಟು ಅದ್ಭುತ ಫಲಿತಾಂಶ ದಾಖಲಿಸಿದೆ. ಒಟ್ಟು 11,516 ವಿದ್ಯಾರ್ಥಿಗಳಲ್ಲಿ 11,047 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕೇವಲ ಫಲಿತಾಂಶ ಮಾತ್ರವಲ್ಲದೆ, ರಾಜ್ಯಮಟ್ಟದಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಒಟ್ಟು 27 ರಾಂಕ್ಗಳನ್ನು ಪಡೆಯುವ ಮೂಲಕ ಕೆಎಲ್ಇ ಇಡೀ ಕರ್ನಾಟಕದ ಗಮನ ಸೆಳೆದಿದೆ. ವಿಶೇಷವಾಗಿ 1,007 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆಯುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ನಮ್ಮ ಸಂಸ್ಥೆಯ ಮೂಲ ಉದ್ದೇಶವೇ ಗ್ರಾಮೀಣ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಜಾಗತಿಕ ಗುಣಮಟ್ಟದ ಶಿಕ್ಷಣ ನೀಡುವುದು. ಈ ವರ್ಷದ ಫಲಿತಾಂಶವು ಸಂಸ್ಥೆಯ ಬದ್ಧತೆ ಮತ್ತು ಶಿಕ್ಷಕರ ಪರಿಶ್ರಮಕ್ಕೆ ಸಿಕ್ಕ ಫಲವಾಗಿದೆ. ರಾಜ್ಯಮಟ್ಟದ 27 ರಾಂಕ್ಗಳು ಮತ್ತು ಜೆಇಇ ಪರೀಕ್ಷೆಯಲ್ಲಿ ನಮ್ಮ ವಿದ್ಯಾರ್ಥಿಗಳು ತೋರಿರುವ ಸಾಧನೆ ನಮಗೆ ಹೆಮ್ಮೆ ತಂದಿದೆ. ಬ್ರಾಂಡ್ ಕೆಎಲ್ಇ ಎಂದರೆ ಕೇವಲ ಶಿಕ್ಷಣವಲ್ಲ, ಅದು ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಭರವಸೆ ಎಂದರು.
ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ JEE ಮತ್ತು NEET ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಕೆಎಲ್ಇ ಸಂಸ್ಥೆಯು ಇಂಟಿಗ್ರೇಟೆಡ್ ಕಾಲೇಜುಗಳ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ತಲುಪಿಸಿದೆ. ಈ ವರ್ಷದ JEE ಪರೀಕ್ಷೆಯಲ್ಲಿ ಸಂಸ್ಥೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಡ್ವಾನ್ಸ್ಡ್ ಪರೀಕ್ಷೆಗೆ ಅರ್ಹತೆ ಪಡೆದಿದ್ದು, ಹಲವರು ಟಾಪ್ ರಾಂಕಿಂಗ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸುಸಜ್ಜಿತ ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್ ರೂಂ ಹಾಗೂ ನುರಿತ ಶಿಕ್ಷಕ ವೃಂದದ ಮಾರ್ಗದರ್ಶನದಿಂದಾಗಿ ಇಂದು ಕೆಎಲ್ಇ ವಿದ್ಯಾರ್ಥಿಗಳು ಕೇವಲ ಪದವಿ ಶಿಕ್ಷಣಕ್ಕೆ ಮಾತ್ರವಲ್ಲದೆ, ರಾಷ್ಟ್ರೀಯ ಮಟ್ಟದ ಉನ್ನತ ವೃತ್ತಿಪರ ಕೋರ್ಸ್ಗಳಿಗೂ ಸಜ್ಜಾಗುತ್ತಿದ್ದಾರೆ. 37 ಪಿಯು ಕಾಲೇಜುಗಳ ಮೂಲಕ ನಾವು ಗಡಿಭಾಗ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಬೆಳಕಾಗುತ್ತಿದ್ದೇವೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮೂರೂ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿರುವುದು ನಮ್ಮ ಇಂಟಿಗ್ರೇಟೆಡ್ ಶಿಕ್ಷಣ ಪದ್ಧತಿಯ ಯಶಸ್ಸನ್ನು ತೋರಿಸುತ್ತದೆ. ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿರುವುದು ಶೈಕ್ಷಣಿಕ ಕ್ಷೇತ್ರದಲ್ಲಿನ ನಮ್ಮ ಶಿಸ್ತು ಮತ್ತು ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದು ನಿರ್ದೇಶಕ ಮಹಾಂತೇಶ್ ಕವಟಗಿಮಠ ತಿಳಿಸಿದರು.
