ಆ ದೇವಿ ಜಗನ್ಮಾತೆ ಎಂದು ಖ್ಯಾತಿ ಪಡೆದು ಭಕ್ತರನ್ನು ಸಲಹುತ್ತಿರುವವಳು. ಆ ದೇವಿ ವರ್ಷದಲ್ಲಿ ಮೂರು ಬಾರಿ ನಿದ್ರೆಗೆ ಜಾರುತ್ತಾಳೆ. ಅದರಲ್ಲೂ ನವರಾತ್ರಿಯ ಸಂದರ್ಭದಲ್ಲಿ ನಿದ್ರೆಗೆ ಜಾರುವ ಆ ದೇವಿಯನ್ನು ಜಾಗೃತಗೊಳಿಸಲು 15 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿ ಆ ದೇವಿಗೆ ಅಭಿಷೇಕ ಸಲ್ಲಿಸುತ್ತಾರೆ. ಇಂತಹ ಉತ್ಸಾಹ ಭರಿತ ಕಾರ್ಯಕ್ರಮದ ವರದಿಯನ್ನು ನಿಮ್ಮ ಇನ್ ನ್ಯೂಜ್ ತಂಡ ಕಳೆದ ಒಂಭತ್ತು ವರ್ಷಗಳಿಂದ ಕೊಡುತ್ತಿದೆ. ನಮ್ಮ ವರದಿಗಾರ ವಿಜಯಕುಮಾರ ಸಾರವಾಡ ನೇತೃತ್ವದ ತಂಡ ಎರಡು ದಿನಗಳ ಕಾಲ ಆ ಲಕ್ಷಾಂತರ ಭಕ್ತರ ಜೊತೆಗೆ ಪಾದಯಾತ್ರೆ ಮಾಡೋದರ ಜೊತೆಗೆ ನವರಾತ್ರಿಯ ಸಂದರ್ಭದಲ್ಲಿ ಆ ದೇವಿಗೆ ನಡೆಯುವ ಪ್ರತಿ ಪೂಜಾ ವಿಶೇಷತೆಗಳನ್ನು ನಿಮ್ಮ ಮನೆಯಲ್ಲಿ ಕುಳಿತು ವೀಕ್ಷಿಸಲು ಅವಕಾಶ ಮಾಡಿಕೊಡುತ್ತಾ ಬರುತ್ತಿದೆ. ಇಂದು ಕೋಜಗಿರಿ ಹುಣ್ಣಿಮೆಯ ದಿನ ನಡೆದ ಅಭಿಷೇಕ ವರದಿಯನ್ನು ನಿಮ್ಮ ಇನ್ ನ್ಯೂಜ್ ಈ ವರ್ಷವೂ ತಂದಿದೆ. ನೋಡ್ಕೊಂಡು ಬರೋಣ ಬನ್ನಿ…
ಜಗನ್ಮಾತೆ ಎಂದಾಕ್ಷಣ ಕಣ್ಮುಂದೆ ಬರುವವಲೇ ಅಷ್ಟಭುಜಗಳಲ್ಲಿ ಅಷ್ಟ ಆಯುಧ ಹಿಡಿದಿರುವ ತುಳಜಾಭವಾನಿ. ತುಳಜಾಭವಾನಿ ನೆರೆಯ ಮಹಾರಾಷ್ಟ್ರ ರಾಜ್ಯದ ಧಾರಶಿವ ಜಿಲ್ಲೆಯ ತುಳಜಾಪುರದಲ್ಲಿ ನೆಲೆಸಿದ್ದು ಭಕ್ತರ ಇಷ್ಟಾರ್ಥ ಸಿದ್ಧಿಯಾಗುವಂತೆ ಆಶಿರ್ವದಿಸುತ್ತಿದ್ದಾಳೆ. ತುಳಜಾಪುರ ತುಳಜಾ ಭವಾನಿಯ ದೇವಸ್ಥಾನ ದೇಶದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದು. ಸದ್ಯ ಆ ತಾಯಿಯ ಜಾತ್ರೆ ಭಾರೀ ಸಡಗರದಿಂದ ನಡೆಯುತ್ತಿದ್ದು ಕರ್ನಾಟಕದಿಂದಲೂ ಲಕ್ಷಾಂತರ ಭಕ್ತರು ದರ್ಶನಕ್ಕೆ ಆಗಮಿಸಿದ್ದರು.
ಹೆಗಲಿಗೆ, ತಲೆಗೆ ಕೇಸರಿ ಧ್ವಜ, ಕೇಸರಿ ಶಾಲು, ತಲೆಗೆ ರುಮಾಲು, ಪಲ್ಲಕ್ಕಿ ಹೊತ್ತು, ಕೈಯಲ್ಲಿ ನಾದಸ್ವರ ಹಿಡಿದು ಆಯಿರಾಧಾ ಉಧೇ..ಉಧೇ.. ಉಧೇ… ಸದಾನಂದಿಚಾ ಉಧೇ..ಉಧೇ.. ಉಧೇ..ಜೈ ಮಾತಾದಿ, ತುನೇ ಮುಜೆ ಬುಲಾಯಾ ಷೇರಾವಾಲಿಯೇ ಎಂಬ ಜೈಕಾರ ಮೊಳಗಿಸಿದರು. ಇನ್ನೂ ತುಳಜಾ ಭವಾನಿಯು ವಿಜಯದಶಮಿಯಂದು ಕುಕ್ಕುರ ರಕ್ಕಸನ ಜೊತೆಯಲ್ಲಿ ಯುದ್ದದಲ್ಲಿ ವಿಜಯದ ಮಾಲೆ ಧರಿಸಿದ ಪುರಾಣವಿದೆ. ಅದೇ ದಿನ ವಿಶ್ರಾಂತಿಗಾಗಿ ದೇವಿಯು ನಿದ್ರೆಗೆ ಜಾರುತ್ತಾಳೆ. ಐದು ದಿನಗಳ ಶ್ರಮ ವಿಶ್ರಾಂತಿ ಬಳಿಕ ನಿದ್ರೆಯಿಂದ ಎಚ್ಚರಗೊಳ್ಳುತ್ತಾಳೆ. ಆಗಲೇ ಅಭಿಷೇಕ ನಡೆಯುತ್ತೆ. ಆ ಅಭಿಷೇಕ ಕಣ್ತುಂಬಿಕೊಳ್ಳೋಕೆ ಭಕ್ತರು ಪಾದಯಾತ್ರೆ ಮಾಡುತ್ತಾರೆ.
ಪ್ರತಿ ವರ್ಷ ದಸರಾ ಬಳಿಕ ತುಳಜಾಪುರದ ಭವಾನಿ ಮಾತೆಯ ದರ್ಶನಕ್ಕೆ ಹೋಗುವುದು ಅಸಂಖ್ಯ ಭಕ್ತರ ವಾಡಿಕೆ. ದೇವಿಯ ಅಭಿಷೇಕದಲ್ಲಿ ಪಾಲ್ಗೊಂಡ ಭಕ್ತರ ಬಾಳು ಬಂಗಾರವಾಗುತ್ತೆ ಅನ್ನೋ ನಂಬಿಕೆಯಿದೆ. ಹೀಗಾಗಿ ಮಾತೆಯನ್ನು ಕಾಣಲು ಭಕ್ತ ಸಾಗರವೇ ಹರಿದು ಬರುತ್ತದೆ. ಮದ್ಯಾಹ್ನ ಬಿಸಿಲಿಗೆ, ರಾತ್ರಿ ಸಮಯ ಚಳಿಗೆ ನಡುಗುವ ಭಕ್ತರು ಆ ಭವಾನಿಯ ನಾಮಸ್ಮರಣೆಯಲ್ಲಿ “ಆಯಿ ಭವಾನಿ” ಘೋಷಣೆ ಹಾಕುತ್ತಾ ಸಾಗಿದರು. ಇನ್ನೂ ದೇವಸ್ಥಾನದ ಆವರಣದಲ್ಲಿ ನವರಾತ್ರಿಯಲ್ಲಿ ಹೂವಿನ ಅಲಂಕಾರ ದೇವಿಯನ್ನು ನೋಡುವದೇ ಒಂದು ಮಹಾದಾನಂದ. ಇನ್ನೂ ಕರ್ನಾಟಕದ ದಸರಾ ಮಹೋತ್ಸವ ಅಂತರರಾಷ್ಟ್ರೀಯ ಮನ್ನಣೆ ಪಡೆದಿದೆ. ಅದೇ ರೀತಿ ರಾಜ್ಯ ಉತ್ಸವವನ್ನು ಆಚರಣೆ ಮಾಡುವ ಮೂಲಕ ದೇಶದಲ್ಲಿಯೇ ಅಂಭಾ ಭವಾನಿ ಉತ್ಸವವನ್ನು ಜನಪ್ರಿಯಗೊಳಿಸಲಾಗಿದೆ. ಇನ್ನೂ ಮಹಾರಾಷ್ಟ್ರ ಸರ್ಕಾರವು ಇಂಗ್ಲಿಷ್, ಮರಾಠಿ, ಕನ್ನಡ, ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ಸೂಚನಾ ಫಲಕ ಅಳವಡಿಸಿ ಭಕ್ತರಿಗೆ ಅನುಕೂಲ ಕಲ್ಪಿಸಿತ್ತು. ಸುಗಮ ಸಾರಿಗೆ, ಸೂಕ್ತ ರಕ್ಷಣೆಗೆ ಅಗತ್ಯ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಕರ್ನಾಟಕ, ತೆಲಾಂಗಣ, ಆಂಧ್ರ, ಮಹಾರಾಷ್ಟ್ರದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. ನಿತ್ಯ 400 ಭಕ್ತರಿಗೆ ಅಭಿಷೇಕಕ್ಕೆ ಅವಕಾಶ ನೀಡಲಾಗಿದೆ.
ಒಟ್ಟಿನಲ್ಲಿ ಜಗನ್ಮಾತೆ ತುಳಜಾ ಭವಾನಿ ತನ್ನಲ್ಲಿಗೆ ಬರೋ ಲಕ್ಷಾಂತರ ಭಕ್ತರ ಹರಸಿ ಕಳುಹಿಸುತ್ತಿದ್ದಾಳೆ. ಇನ್ನೂ ತುಳಜಾಪುರ ಕ್ಕೆ ಹೋಗದ ಭಕ್ತರಿಗೆ ಮನೆಯಲ್ಲಿ ಕುಳಿತು ನಿಮ್ಮ ಟಿವಿ ಪರದೆ ಮೇಲೆ ತುಳಜಾಪುರದಲ್ಲಿ ಆಗುಹೋಗುಗಳ ಕುರಿತು ವರದಿ ಇನ್ ನ್ಯೂಜ್ ತಂಡ ಯಶಸ್ವಿಯಾಗಿ ನೀಡುತ್ತಿದೆ. ನಿಮ್ಮ ಪ್ರೋತ್ಸಾಹ ಇದೇ ರೀತಿಯಾಗಿ ಮುಂದುವರೆಯಲಿ ಎನ್ನೋ ಆಶಯದೊಂದಿಗೆ ಮುಂದಿನ ವರ್ಷವೂ ಭಕ್ತಿಯಿಂದ ವರದಿ ಕೊಡಲಿದ್ದೇವೆ. ಜೈ ಮಾ ಭವಾನಿ…

