ಸವದತ್ತಿ ಪಟ್ಟಣದ ಯಲ್ಲಮ್ಮನ ಗುಡ್ಡದಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಆವರಣದಲ್ಲಿನ ಅನಧಿಕೃತ ಮಳಿಗೆಗಳ ತೆರವು ಕಾರ್ಯಾಚರಣೆಗೆ ವ್ಯಾಪಾರಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಪ್ರಾಧಿಕಾರದ ಆಯುಕ್ತರನ್ನೇ ದೇಗುಲದಲ್ಲಿ ಕೂಡಿ ಹಾಕಿದ ಘಟನೆ ನಡೆದಿದೆ.

ಸರ್ಕಾರ ಬೆಳಗಾವಿ ತಾಲೂಕಿನ ಸವದತ್ತಿ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನವನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲು ಮುಂದಾಗಿದೆ. ಈ ಹಿನ್ನೆಲೆ ಹಂತ ಹಂತವಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಇಂದು ದೇವಸ್ಥಾನದ ಆವರಣದಲ್ಲಿನ ಅತಿಕ್ರಮಣವನ್ನು ಶ್ರೀರೇಣುಕಾ ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಅಶೋಕ ದುಡಗುಂಟಿ ನೇತೃತ್ವದಲ್ಲಿ ತೆರವುಗೊಳಿಸಲು ಮುಂದಾದಾಗ ಅಲ್ಲಿನ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಗಿ ಪೊಲೀಸ್ ಭದ್ರತೆಯೊಂದಿಗೆ ತೆರವು ಕಾರ್ಯಾಚರಣೆಗೆ ಅಧಿಕಾರಿಗಳು ಮುಂದಾಗಿದ್ದರು. ಆದರೇ, ತೆರವು ಕಾರ್ಯಾಚರಣೆ ವಿರೋಧಿಸಿ ವ್ಯಾಪಾರಿಗಳು ಶ್ರೀರೇಣುಕಾ ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಕಚೇರಿ ಮುತ್ತಿಗೆ ಹಾಕಿದರು.

ಅಲ್ಲದೇ ಪ್ರಾಧಿಕಾರದ ಆಯುಕ್ತ ಅಶೋಕ ದುಡಗುಂಟಿ ಅವರನ್ನು ದೇಗುಲದಲ್ಲಿ ಕೂಡಿಹಾಕಿ ಆಕ್ರೋಶ ವ್ಯಕ್ತಪಡಿಸಲಾಯಿತು. ಅಧಿಕಾರಿಗಳ ಕಾರ್ಯಾಚರಣೆಗೆ ವ್ಯಾಪಾರಿಗಳು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಯಾವುದೇ ಅಹಿತಕರ ಘಟನೆ ಆಗದಂತೆ ಪೊಲೀಸರ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿದ್ದಾರೆ.
