Belagavi

762 ಎಕರೆ ಸರಕಾರಿ ಜಮೀನು ನುಂಗಿದ ಪ್ರಭಾವಿ ಭೂ-ಗಳ್ಳರು

Share

ಮುಡಾ ದಲ್ಲಿ ಅನಧಿಕೃತವಾಗಿ ನಿವೇಶನಗಳನ್ನು ಪಡೆಯಲಾದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಮುಡಾ ಹಗರಣ ವಕ್ಫ್ ಹಗರಣಗಳು ಇಡೀ ದೇಶಾದ್ಯಂತ ಸುದ್ದಿಯಾಗಿ ರಾಜ್ಯ ರಾಜಕೀಯದಲ್ಲಿ ಭಯಂಕರ ಬಿರುಗಾಳಿಯನ್ನೇ ಎಬ್ಬಿಸಿರುತ್ತವೆ. ಹಗರಣದ ಆರೋಪ ಹೊತ್ತಿರುವ ಮುಖ್ಯಮಂತ್ರಿಗಳು ಯಾವುದೇ ಕ್ಷಣದಲ್ಲಿ ರಾಜೀನಾಮೆ ನೀಡಬಹುದು ಎಂದು ವಿರೋಧ ಪಕ್ಷಗಳು ಜಾತಕ ಪಕ್ಷಿಗಳಂತೆ ಕಾದು ಕುಳಿತಿರುವ ಸಮಯದಲ್ಲಿಯೇ ಬೆಳಗಾವಿ ಜಿಲ್ಲೆಯ ಸಚಿವರುಗಳು ಹಾಗೂ ಪ್ರಭಾವಿ ರಾಜಕಾರಣಿಗಳ ಬೆಂಬಲದಿಂದ ಜಿಲ್ಲೆಯಲ್ಲಿ ಬರೊಬ್ಬರಿ 762 ಎಕರೆ 20 ಗುಂಟೆ ಸರಕಾರಿ ಜಮೀನವನ್ನು ಅಧಿಕಾರಿಗಳು ಹಾಗೂ ಭೂ-ಗಳ್ಳರು ಕೂಡಿಕೊಂಡು ತಿಂದು ಹಾಕಿರುವ ಸಂಗತಿಯು ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದ್ದಾರೆ.

ಇದು ರಾಜ್ಯದಲ್ಲಿಯೇ ನಡೆದಿರುವ ಅತ್ಯಂತ ದೊಡ್ಡ ಪ್ರಮಾಣ ಭೂ ಕಬಳಿಕೆ ಹಗರಣ ಎಂದರೆ ತಪ್ಪಾಗಲಾರದು.ಜಿಲ್ಲೆಯ ರಾಯಬಾಗ ತಾಲೂಕಿನ ದೇವನಕಟ್ಟಿ ಗ್ರಾಮದ ರಿ.ಸ.ನಂ 59 ಕ್ಷೇತ್ರ 152 ಎಕರೆ 20 ಗುಂಟೆ ಹಾಗೂ ರಿ.ಸ.ನಂ 79 ಕ್ಷೇತ್ರ 101 ಎಕರೆ 20 ಗುಂಟೆ ಇವುಗಳ ಒಟ್ಟು ಕ್ಷೇತ್ರ 254 ಎಕರೆ ಇದ್ದು ಸರಕಾರಕ್ಕೆ ಸೇರಿದ “ಗುಡ್ಡದ ಪಡ” ಎಂದು ಪರಿಗಣಿಸಿದ್ದು, ಈ ‘ಜಮೀನನ್ನು ಅಧಿಕಾರಿಗಳು ಕರ್ನಾಟಕ ಸರಕಾರ ಎಂದು ಪಹಣಿ ಪತ್ರಿಕೆಯಲ್ಲಿ ದಾಖಲಿಸದೇ ಇರುವುದರಿಂದ ಅಧಿಕಾರಿಗಳು ಹಾಗೂ ರಾಜಕೀಯ ಪ್ರಭಾವ ಹೊಂದಿರುವ ಖಾಸಗಿ ವ್ಯಕ್ತಿಗಳು ಸೇರಿಕೊಂಡು 254 ಎಕರೆ ಸರಕಾರಿ ಜಮೀನಕ್ಕೆ ತಮ್ಮ ಹೆಸರುಗಳನ್ನು ದಾಖಲಿಸಿಕೊಳ್ಳುವ ಮೂಲಕ ಸರಕಾರಕ್ಕೆ ಮೋಸ ಮಾಡಿರುತ್ತಾರೆ.

ಅದರಂತೆ ಖಾನಾಪೂರ ತಾಲೂಕಿನ ಜಾಂಬೋಟಿ ಹೋಬಳಿಯ ಹುಳಂದ ಗ್ರಾಮಕ್ಕೆ ಸೇರಿದ ರಿ.ಸ.ನಂ 03 ಕ್ಷೇತ್ರ 508 ಎಕರೆ 20 ಗುಂಟೆ ಇದರ ಕಾಲಂ ನಂ:11 ಹಾಗೂ 02 ರಲ್ಲಿ “ಊರಿನ ಎಲ್ಲ ಜನರು” ಎಂದು ದಾಖಲಿರುತ್ತದೆ. ನಿಯಮಗಳನ್ನು ಗಾಳಿಗೆ ತೂರಿದ ಕಂದಾಯ ಅಧಿಕಾರಿಗಳು ಮತ್ತು ಪ್ರಭಾವಿ ಭೂ-ಗಳ್ಳರು 762 ಎಕರೆ ಸರಕಾರಿ ಜಮೀನು ನುಂಗಿದ್ದಾರೆ. ರಾಯಬಾಗ ತಾಲೂಕಿನ ದೇವನಕಟ್ಟಿ ಗ್ರಾಮದ ಪ್ರಕರಣದ ಕುರಿತು ದಿನಾಂಕ 23/09/2024 ರಂದೇ ಸರಕಾರಕ್ಕೆ ದೂರು ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಜರುಗಿಸದೇ ಇರುವುದು ಸರಕಾರದ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ. 2015 ರಲ್ಲಿಯೂ ನಸಲಾಪೂರ ಗ್ರಾಮಕ್ಕೆ ಸೇರಿದ 114 ಎಕರೆ 34 ಗುಮಟೆ ಸರಕಾರಿ ಜಮೀನಕ್ಕೆ ಸಂಬಂದಿಸಿದಂತೆ “ಅಪಸಾತ ಡಿಕ್ರಿ” ಮಾಡಿದ್ದ ಪ್ರಕರಣದಲ್ಲಿ ರಾಯಬಾಗ ಹಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ಸೇವೆಯಿಂದ ಅಮಾನತ್ತುಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಒಟ್ಟಾರೆಯಾಗಿ ಸರಕಾರಕ್ಕೆ ಸೇರಿದ ಜಮೀನುಗಳು ಎಂದು ದಾಖಲೆಗಳು ಹೇಳುತ್ತಿದ್ದರೂ ಕೂಡಾ 762 ಎಕರೆ 20 ಗುಂಟೆ ಜಮೀನವನ್ನು ಕರ್ನಾಟಕ ಸರಕಾರ ಎಂದು ದಾಖಲಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದನ್ನು ಗಮನಿಸಿದರೆ ಜಿಲ್ಲೆಯಲ್ಲಿ ನಡೆದಿರುವ ಈ ಎರಡೂ ಭೂ ಹಗರಣಗಳ ಹಿಂದೆ ಸಚಿವರುಗಳು ಹಾಗೂ ಪ್ರಭಾವಿ ರಾಜಕಾರಣಿಗಳ ಕೈವಾಡ ಇರಬಹುದಾಗಿದೆ ಎಂದು ಜನ ಸಾಮಾನ್ಯರು ಮಾತನಾಡುತ್ತಿದ್ದಾರೆ.

ಕಾರಣ ಇನ್ನು ಮೇಲಾದರೂa ವಿರೋಧ ಪಕ್ಷಗಳು ಕೆಲವು ದಿನ ಮುಡಾ ಹಗರಣ/ ವಕ್ಫ್ ಹಗರಣಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಬೆಳಗಾವಿ ಜಿಲ್ಲೆಯ ಈ ಬೃಹತ್ ಭೂ ಹಗರಣದ ಬಗ್ಗೆ ಮಾತನಾಡಿದರೆ ಆವಾಗಲಾದರೂ ಸರಕಾರಕ್ಕೆ ಸೇರಿದ 762 ಎಕರೆ 20 ಗುಂಟೆ ಜಮೀನು ಸರಕಾರಕ್ಕೆ ಉಳಿಯಬಹುದಾಗಿದೆ ಎನ್ನುವುದು ಜಿಲ್ಲೆಯ ಜನರ ಆಶಯವಾಗಿದೆ ಎಂದಿದ್ದಾರೆ.

Tags:

error: Content is protected !!