ಚನ್ನಮ್ಮನ ವಿಜಯೋತ್ಸವರ 200 ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಚನ್ನಮ್ಮನ ಕಿತ್ತೂರು ಉತ್ಸವವನ್ನು ವಿಶ್ವ ಮಟ್ಟದ ಕಾರ್ಯಕ್ರಮವನ್ನಾಗಿ ಅದ್ದೂರಿಯಾಗಿ ಆಚರಿಸಲಾಗುವುದು. ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಹೇಳಿದರು. ಕಿತ್ತೂರಿನ ಶೆಟ್ಟರ ಕಲ್ಯಾಣ ಮಂಟಪದಲ್ಲಿ ಜರುಗಿದ ಚನ್ನಮ್ಮನ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಈ ಬಾರಿಯ 200ನೇ ವರ್ಷದ ವಿಜಯೊತ್ಸವದ ಪ್ರಯುಕ್ತ ದೇಶದ ವಿವಿಧ ರಾಜ್ಯಗಳ ಆಹಾರ ಪದ್ಧತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಅನ್ನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.

ಈ ಬಾರಿಯ ಉತ್ಸವದ ನೆನಪಿಗಾಗಿ ರಾಣಿ ಚನ್ನಮ್ಮನ ಭಾವಚಿತ್ರವಿರುವ ಅಂಚೆ ಚೀಟಿ ಬಿಡುಗಡೆಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ವಾಯುವ್ಯ ಕರ್ನಾಟಕ ಸಾರಿಗೆ ಹೆಸರನ್ನು “ಕಿತ್ತೂರು ಕರ್ನಾಟಕ ಸಾರಿಗೆ ಸಂಸ್ಥೆ” ಎಂದು ನಾಮಕರಣಕ್ಕೆ ಹಾಗೂ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಬದಲಾಗಿ “ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ’ ಎಂದು ಮರುನಾಮಕರಣಕ್ಕಾಗಿ ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಹೇಳಿದ್ದರು .

ಕಿತ್ತೂರು ಉತ್ಸವದಲ್ಲಿ ಕವಿಗೋಷ್ಠಿ ಆಯೋಜನೆ ಜೊತೆಗೆ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಗೋಷ್ಠಿ ಆಯೋಜನೆ, 200ನೇ ವರ್ಷದ ವಿಜಯೋತ್ಸವದ ಪ್ರಯುಕ್ತ 200 ಜನ ಸಾಧಕರನ್ನು ಗುರುತಿಸಿ ಸನ್ಮಾನ; ಮಲ್ಲಸರ್ಜ ಪುತ್ಥಳಿ ನಿರ್ಮಾಣ; ಕಿತ್ತೂರು ಆಳ್ವಿಕೆಗೆ ಸಂಬಂಧಿಸಿದ ಸ್ಮಾರಕಗಳ ಸಂರಕ್ಷಣೆ; ಉತ್ಸವದ ಮೆರವಣಿಗೆಯಲ್ಲಿ ಪೋಲಿಸ್ ಬ್ಯಾಂಡ ಹಾಗೂ ಮರಾಠಾ ಲೈಟ್ ಇನಫೆಂಟ್ರಿ ಬ್ಯಾಂಡ್ ಕರೆತರುವುದರ ಮೂಲಕ ಅದ್ಧೂರಿ ಕಿತ್ತೂರು ಉತ್ಸವ ಆಚರಣೆಗಾಗಿ ಸಾರ್ವಜನಿಕರು ಅನೇಕ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಸಿ.ಇ.ಓ ರಾಹುಲ್ ಶಿಂಧೆ, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಪ್ರಶಿಕ್ಷಣಾರ್ಥಿ ಆಯ್.ಎ.ಎಸ್. ಅಧಿಕಾರಿ ದಿನೇಶಕುಮಾರ ಮೀನಾ, ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸಂಪಗಾವಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿಗಾರರು
ಶಾನೂಲ ಮ
ಕಿತ್ತೂರು
