ವೀರಶೈವ ಲಿಂಗಾಯತ ಸಮಾಜದವರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಕೇವಲ ಬಿಜೆಪಿಗೆ ಮಾತ್ರ ಸಾಧ್ಯ ಎಂದು ಕೆಎಂಎಫ್ ಅಧ್ಯಕ್ಷ ಹಾಗು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಶುಕ್ರವಾರದಂದು ತಾಲೂಕಿನ ನಾಗನೂರ ಪಟ್ಟಣದ ಹೊರವಲಯದಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ ಅರಭಾವಿ ಮತಕ್ಷೇತ್ರದ ವೀರಶೈವ ಲಿಂಗಾಯತ ಸಮಾಜದ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಇನ್ನುಳಿದ ಪಕ್ಷಗಳು ಈ ಸಮುದಾಯಕ್ಕೆ ಸೇರಿರುವ ಯಾರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವದಿಲ್ಲ. ಆದ್ದರಿಂದ ಈ ರಾಜ್ಯದಲ್ಲಿ ಪ್ರಬಲ ಲಿಂಗಾಯತ ಸಮುದಾಯದ ಮುಖ್ಯಮಂತ್ರಿಯಾಗಬೇಕಾದರೆ ವೀರಶೈವ ಲಿಂಗಾಯತ ಸಮಾಜ ಬಾಂಧವರು ಒಗ್ಗಟ್ಟಿನಿಂದ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಆಶೀವರ್ಾದ ಮಾಡುವಂತೆ ಅವರು ಮನವಿ ಮಾಡಿದರು.
ಬರುವ ಚುನಾವಣೆಯಲ್ಲಿ ಸಮಾಜ ಬಾಂಧವರು ಒಂದಾಗಿ ಒಗ್ಗಟ್ಟಿನಿಂದ ಮತಗಳು ಬೇರೆ ಪಕ್ಷಗಳಿಗೆ ಹೋಗದಂತೆ ನೋಡಿಕೊಂಡು ಬಿಜೆಪಿಗೆ ಮತ ನೀಡಿದರೇ ನಿಮ್ಮ ಸಮುದಾಯದವರೊಬ್ಬರು ಮುಖ್ಯಮಂತ್ರಿಯಾಗುವ ಅವಕಾಶವು ಮತ್ತೊಮ್ಮೆ ಕೂಡಿ ಬರಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ವೀರಶೈವ ಲಿಂಗಾಯತರು ಅತ್ಯಧಿಕ ಪ್ರಮಾಣದಲ್ಲಿದ್ದರೆ 2ನೇ ಸ್ಥಾನದಲ್ಲಿ ಒಕ್ಕಲಿಗರಿದ್ದಾರೆ. ಕುರುಬ ಸಮುದಾಯ 3ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಪ್ರಮುಖವಾಗಿದ್ದು ಇದರಲ್ಲಿ ವೀರಶೈವ ಲಿಂಗಾಯತ ಸಮಾಜದವರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಕೇವಲ ಬಿಜೆಪಿ ಮಾತ್ರ ಎಂದು ಪುನರುಚ್ಚರಿಸಿದರು.