ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ನೇತೃತ್ವದ ತಂಡ ಸೋಮವಾರ ನಡೆಸಿದ 9 ನೇ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಸೇರಿದಂತೆ ಜಿಲ್ಲೆಯ ಜನರು ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಬುಡರಕಟ್ಟಿ ಗ್ರಾಪಂ ರಸ್ತೆ ಮಾಡಿದ್ದು ಸರಕಾರಿ ಶಾಲೆಗೆ ಹೋಗುವ ಮಕ್ಕಳಿಗೆ ತೊಂದರೆಯಾಗುತ್ತಿದೆ. ಹೊಸ ರಸ್ತೆ ನಿರ್ಮಾಣ ಮಾಡಿದ ಕಡೆಗಳಲ್ಲಿ ರೋಡ್ ಹಂಪ್ ಗಳನ್ನು ನಿರ್ಮಿಸುವಂತೆ ವ್ಯಕ್ತಿಯೊರ್ವ ಎಸ್ಪಿ ಅವರಿಗೆ ಕರೆ ಮಾಡಿ ದೂರಿದ ಇದಕ್ಕೆ ಸ್ಪಂದಿಸಿದ ಎಸ್ಪಿ ಅವರು ಸಂಬಂಧಿಸಿದ ಇಲಾಖೆಯವರಿಗೆ ಸೂಚಿಸಲಾಗುವುದು ಎಂದರು.
ಗೋಕಾಕ ತಾಲೂಕಿನಲ್ಲಿ ವ್ಯಕ್ತಿಯೊರ್ವ ಮಾರಕಾಸ್ತ್ರ ಹಿಡಿದುಕೊಂಡು ಬೇಕಾಬಿಟ್ಟಿಯಾಗಿ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾನೆ. ಇದರಿಂದ ಇಲ್ಲಿನ ಜನರು ಜೀವ ಭಯದಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇವನ ಮೇಲೆ ಕ್ರಮ ಕೈಗೊಳ್ಳಬೇಕೆಂದು ವ್ಯಕ್ತಿಯೊರ್ವ ಎಸ್ಪಿಗೆ ಕರೆ ಮಾಡಿ ದೂರಿದರು. ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದರು.
ಸವದತ್ತಿ ತಾಲೂಕಿನ ವ್ಯಕ್ತಿಯೊರ್ವ ಕರೆ ಮಾಡಿ ನನ್ನ ಸಹೋದರ ಜಮೀನಿಗೆ ನೀರು ಹಾಯಿಸಲು ಬಿಡುತ್ತಿಲ್ಲ. ವಿನಾಕಾರಣ ಕಿರಿಕಿರಿ ಮಾಡುತ್ತಿದ್ದಾನೆ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಡಾ. ಸಂಜೀವ ಪಾಟೀಲ ನಮ್ಮ ವ್ಯಾಪ್ತಿಗೆ ಬರುವುದಿದ್ದರೆ ಅದನ್ನು ಬಗೆ ಹರಿಸಲಾಗುವುದು ಎಂದರು.
ಬೆಳಗಾವಿ ಹನುಮಾನ ನಗರದ ಮಹಿಳೆ ಕರೆ ಮಾಡಿ ನಮ್ಮ ಪತಿಯ ಬೈಕ ಕಳ್ಳತನವಾಗಿದ್ದು, ಎಪಿಎಂಸಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಅದನ್ನು ಹುಡುಕಿ ಕೊಡುವಂತೆ ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಅವರು ನಗರ ಪೊಲೀಸ್ ಇಲಾಖೆಗೆ ತಿಳಿಸಲಾಗುವುದು ಎಂದರು.
ರಾಯಬಾಗ ತಾಲೂಕಿನ ಬಾವನಸಂವದತ್ತಿಯ ಯುವಕನೊರ್ವ ಕರೆ ಮಾಡಿ ಕೆಎಂಎಫ್ ಹಾಲಿನ ಪಾಕೇಟ್ ತೆಗೆದುಕೊಂಡು ನೀರು ಕಲುಷಿತ ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ, ಅಕ್ರಮವಾಗಿ ಸರಾಯಿ ಮಾರಾಟ ಹಾಗೂ ಮಾಧಕ ವಸ್ತುಗಳು ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿಕೊಂಡರು.ಇದಕ್ಕೆ ಸ್ಪಂದಿಸಿದ ಎಸ್ಪಿ ಅವರು ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಥಣಿ ತಾಲೂಕಿನ ವ್ಯಕ್ತಿಯೊರ್ವ ಕರೆ ಮಾಡಿ ಅಕ್ರಮವಾಗಿ ಕೃಷ್ಣಾ ನದಿಯಿಂದ ಮರಳು ಸಾಗಾಟ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಅವರು ರಾತ್ರಿ ಸಮಯದಲ್ಲಿ ಪೊಲೀಸರನ್ನು ನಿಯೋಜಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಗೋಕಾಕ ತಾಲೂಕಿನಲ್ಲಿ ಸಂಚಾರ ಸಮಸ್ಯೆ ಹೆಚ್ವಾಗಿದೆ. ಇಲ್ಲಿ ಸಂಚಾರ ಪೊಲೀಸ್ ಠಾಣೆ ಮಾಡಿ ನಿಯಂತ್ರಣ ಮಾಡಬೇಕೆಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಅವರು ಸಂಚಾರ ಪೊಲೀಸ್ ಠಾಣೆಯ ಕುರಿತು ಸ್ಥಳೀಯರು ಅರ್ಜಿ ಕೊಟ್ಟರೆ ಸರಕಾರಕ್ಕೆ ಕಳುಹಿಸಲಾಗುವುದು ಎಂದರು
ಈ ಸಂದರ್ಭದಲ್ಲಿ ಪೊಲೀಸ್ ಇನಸ್ಪೆಕ್ಟರ್‌ಗಳಾದ ಮಹಾದೇವ ಎಸ್.ಎಂ. ಶರಣಬಸಪ್ಪ ಅಜೂರ, ಬಾಳಪ್ಪ ತಳವಾರ, ವಿಠ್ಠಲ ಮಾದರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.