ಸಮಾಜದಲ್ಲಿ ನೊಂದ, ನಿರ್ಲಕ್ಷಿತ, ನಿರ್ಗತಿಕ ಹಾಗೂ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುವ ಹಿರಿಯ ನಾಗರಿಕರ ಹಿತರಕ್ಷಣೆಯ ನಿಟ್ಟಿನಲ್ಲಿ ಹಿರಿಯ ನಾಗರಿಕರ ಸಂಘದ ಜತೆಗೂಡಿ ಜಿಲ್ಲಾಮಟ್ಟದಲ್ಲಿ ಪ್ರತ್ಯೇಕ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸುವ ಕುರಿತು ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಭರವಸೆಯನ್ನು ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಹಿರಿಯ ನಾಗರಿಕರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಆಸ್ತಿ ವರ್ಗಾವಣೆ ಮಾಡಿದ ಬಳಿಕ ಒಂದು ವೇಳೆ ಮಕ್ಕಳು ಸರಿಯಾಗಿ ತಂದೆ-ತಾಯಂದಿರ ಪಾಲನೆ-ಪೋಷಣೆ ಮಾಡದಿದ್ದರೆ ಆಸ್ತಿಯನ್ನು ತಂದೆ-ತಾಯಂದಿರಿಗೆ ಮರಳಿ ಪಡೆಯಲು ಕಾಯ್ದೆಯಲ್ಲಿ ಅವಕಾಶಗಳಿವೆ.
ನೊಂದ ಪಾಲಕರು ಬಿಳಿಹಾಳೆಯ ಮೇಲೆ ದೂರು ನೀಡಿದರೂ ಸಾಕು ಸಂಬಂಧಿಸಿದ ಉಪ ವಿಭಾಗಾಧಿಕಾರಿಗಳು ಆದ್ಯತೆ ಮೇರೆಗೆ ಪ್ರಕರಣವನ್ನು ವಿಚಾರಣೆ ನಡೆಸಿ ನ್ಯಾಯ ಒದಗಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಭರವಸೆ ನೀಡಿದರು.
ಆಸ್ಪತ್ರೆಗಳು ಹಾಗೂ ಇತರೆ ಸರಕಾರಿ ಕಚೇರಿಗಳಿಗೆ ಹಿರಿಯ ನಾಗರಿಕರು ಬಂದಾಗ ಅವರ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡಿಕೊಡಬೇಕು. ವಾರದಲ್ಲಿ ಕನಿಷ್ಟ ಒಂದು ದಿನವಾದರೂ ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸೇವಾ ಕೌಂಟರ್ ಆರಂಭಿಸಲು ಸಂಬಂಧಿಸಿದವರಿಗೆ ನಿರ್ದೇಶನ ನೀಡಲಾಗುವುದು.
ಸಾಮಾಜಿಕ ಭದ್ರತಾ ಪಿಂಚಣಿ ಸೌಲಭ್ಯ ಪಡೆಯುತ್ತಿರುವವರ ಅನುಕೂಲಕ್ಕಾಗಿ ಸರಕಾರ ಹೊಸ ತಂತ್ರಜ್ಞಾನ ವ್ಯವಸ್ಥೆಯ ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಅಕೌಂಟ್ ಗೆ ಪಿಂಚಣಿ ಪಾವತಿಸಲಾಗುತ್ತಿದೆ.
ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಸ್ಥಾಪಿಸಲು ನಿರ್ದೇಶನ:
ಬಿಮ್ಸ್ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕವಾದ ಜಿರೆಟಿಕ್ ವಾರ್ಡ್ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ಸೂಚನೆ ನೀಡಿದರು.
ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಪ್ರಯಾಣಿಸುವಾಗ ಹಿರಿಯ ನಾಗರಿಕರ ಇಲಾಖೆಯ ವತಿಯಿಂದ ನೀಡಲಾಗಿರುವ ಗುರುತಿನ ಚೀಟಿಗಳನ್ನು ಕೂಡ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.
ನಿರ್ಗತಿಕ ಹಿರಿಯ ನಾಗರಿಕರಿಗೆ ಆಶ್ರಯ ಒದಗಿಸುವುದು; ದೌರ್ಜನ್ಯಕ್ಕೆ ಒಳಗಾದವರ ರಕ್ಷಣೆ; ಕಾನೂನು ನೆರವು ಸೇರಿದಂತೆ ವಿವಿಧ ಬಗೆಯ ನೆರವು ನೀಡುವ ಕೆಲಸವನ್ನು ಸಹಾಯವಾಣಿ(14567) ಮೂಲಕ ಮಾಡಲಾಗುತ್ತಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ ವರವಟ್ಟಿ, ಹಿರಿಯ ನಾಗರಿಕರಾದ ಮಲ್ಲೇಶಪ್ಪ ಚೌಗಲೆ ಮತ್ತಿತರರು ಉಪಸ್ಥಿತರಿದ್ದರು.
*
ಹಿರಿಯ ನಾಗರಿಕರ ಸಂಘದ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ:
ಸಭೆಯ ನಂತರ ಜಿಲ್ಲಾಧಿಕಾರಿಗಳು ನ್ಯಾಯಾಲಯ ಆವರಣದಲ್ಲಿರುವ ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಸಂಘದ ಜಿಲ್ಲಾ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳನ್ನು ಸನ್ಮಾನಿಸಲಾಯಿತು.