ಮಾಡೋದಿದ್ರೆ ಈಗಲೇ ಸಚಿವ ಸಂಪುಟ ವಿಸ್ತರಣೆ ಮಾಡಿರಿ. ಇಲ್ಲ ಎಂದರೆ ಈಗಿನವರನ್ನೇ ತೆಗೆದುಕೊಂಡೇ ಚುನಾವಣೆಗೆ ಹೋಗುತ್ತೇವೆ. ಆರು ತಿಂಗಳು ಇರುವಾಗ ಮಾಡಿದ್ರೆ ಏನು ಮಾಡಲು ಆಗುತ್ತದೆ. ಮಂತ್ರಿಯಾಗಿ ಬೆಂಗಳೂರಿನಲ್ಲಿ ಕುಳಿತುಕೊಂಡರೆ ಮತಕ್ಷೇತ್ರವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗುತ್ತೆ ಎಂಬ ವಿಚಾರಕ್ಕೆ ಈಗ ಆಗುತ್ತಿದೆ, ಸ್ವಲ್ಪ ದಿವಸದಲ್ಲಿ ಬದಲಾವಣೆ ಆಗಲೇಬೇಕು, ಯುಗಾದಿ ಬರುತ್ತಿದೆ. ಹೊಸದು ಆಗುತ್ತೆ, ಬದಲಾವಣೆ ನಿಶ್ಚಿತ, ಒಳ್ಳೆಯ ಬೆಳವಣಿಗೆ ರಾಜ್ಯದಲ್ಲಿ ಆಗುತ್ತದೆ ಎಂದರು.
ಯಾರೇ ಆದರೂ ಕ್ರಿಯಾಶೀಲವಾಗಿ ಕೆಲಸ ಮಾಡಲಿ, 2ನೇ ನಾಯಕತ್ವ ಕರ್ನಾಟಕಕ್ಕೆ ಬೇಕಾಗಿದೆ. ಯಡಿಯೂರಪ್ಪನವರ ಯುಗ ಮುಗಿದಿದೆ. ಅಲ್ಲದೇ ಇನ್ನು ನಾಲ್ಕೈದು ಜನರ ಯುಗ ಕೂಡ ಮುಗಿಯಲು ಬಂದಿದೆ. ಹೇಗೆ ವಾಜಪೇಯಿಯವರ ನಂತರ ಮೋದಿ ಅವರ ಬಂದರೋ ಅದೇ ರೀತಿ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅವಶ್ಯವಿದೆ, ಮತ್ತೆ ಅದು ಅನಿವಾರ್ಯವಿದೆ. ಇನ್ನು ಬೊಮ್ಮಾಯಿ ಅವರ ಬದಲಾವಣೆ ಬಗ್ಗೆ ನಾನು ಹೇಳಿಲ್ಲ. ನೀವೇ ಹೇಳುತ್ತಿದ್ದಿರಿ ಎಂದು ಮಾಧ್ಯಮಗಳಿಗೆ ಯತ್ನಾಳ್ ಮರು ಪ್ರಶ್ನೆ ಹಾಕಿದರು.
ಲಕ್ಷ್ಮಣ ಸವದಿ ಎಂದಿಗೂ ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ನಾನು ಮೊನ್ನೆಯೇ ಹೇಳಿದ್ದೇನೆ. ಪಕ್ಷ ಅವರನ್ನು ಉಪ ಮುಖ್ಯಮಂತ್ರಿ ಮಾಡಿದೆ. ಹೀಗಾಗಿ ಅವರು ಹೋಗುವುದಿಲ್ಲ. ಇನ್ನು ನಾನು ಯಾವುದೂ ನಿರೀಕ್ಷೆ ಮಾಡಿಲ್ಲ. ಆದರೆ ಮುಂದಿನ ಚುನಾವಣೆಯಲ್ಲಿ ಮಹತ್ವಪೂರ್ಣ ಜವಾಬ್ದಾರಿ ನನಗೆ ಪಕ್ಷ ಕೊಟ್ಟೇ ಕೊಡುತ್ತದೆ ಎಂಬ ವಿಶ್ವಾಸ ನನಗಿದೆ. ನಳೀನಕುಮಾರ್ ಕಟೀಲ್ ಅವರ ಬದಲಾವಣೆ ಇಲ್ಲವೇ ಇಲ್ಲ. ಎಲ್ಲವೂ ಗಾಳಿ ಸುದ್ದಿ. ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ. ಹೊಸಬರು ಮಂತ್ರಿಗಳಾಗುತ್ತಾರೆ, ಹೊಸ ಪದಾಧಿಕಾರಿಗಳು ಬರಬಹುದು ಎಂದರು.
ರಮೇಶ ಜಾರಕಿಹೊಳಿ ಭೇಟಿ ಬಗ್ಗೆ ಮಾತನಾಡಿದ ಯತ್ನಾಳ್ ರಮೇಶ ಜಾರಕಿಹೊಳಿ ಎರಡು ಸಾರಿ ನಮ್ಮ ಬಿಜಾಪುರದ ಮನೆಗೆ ಬಂದು ಊಟ ಮಾಡಿ ಹೋಗಿದ್ದರು. ಹೀಗಾಗಿ ಒಮ್ಮೆ ಊಟಕ್ಕೆ ಮನೆಗೆ ಬನ್ನಿ ಎಂದು ಹೇಳಿದ್ದರು. ಹೀಗಾಗಿ ಹೋಗಿದ್ದೆ, ಈ ವೇಳೆ ನಾವು ಏನನ್ನೂ ಮಾತಾಡಿಲ್ಲ. ಪಕ್ಷದಲ್ಲಿಯೇ ಉಳಿಯಬೇಕು ಎಂಬ ಮನಸ್ಸು ಅವರಿಗಿದೆ. ನಾವೆಲ್ಲರೂ ಕೂಡಿಕೊಂಡು ಪಕ್ಷ ಕಟ್ಟುವ ಬಗ್ಗೆ ಮಾತನಾಡಿದ್ದೇವೆ. ಸಣ್ಣಪುಟ್ಟ ಗೊಂದಲ ಸರಿಪಡಿಸಿ ನಾವೆಲ್ಲಾ ಒಗ್ಗಟ್ಟಾಗಿ ಹೋಗಬೇಕು ಎಂದು ನಿರ್ಧರಿಸಿದ್ದೇವೆ. ಇನ್ನು ಪ್ರಾದೇಶಿಕ ಪಕ್ಷ ಕಟ್ಟುವ ಹೊಲಸು ಕೆಲಸ ಮಾಡೋದಿಲ್ಲ ಎಂದು ಸ್ಪಷ್ಟಪಡಿಸಿದರು.