Crime

ಬೆಳಗಾವಿ ಜಿಲ್ಲೆಯ ಆ ಭ್ರಷ್ಟ ಎಪಿಎಂಸಿ ಅಧಿಕಾರಿಗೆ ಎಷ್ಟು ವರ್ಷ ಜೈಲು ಶಿಕ್ಷೆ ಗೊತ್ತಾ..?

Share

ಎಪಿಎಂಸಿ ಲೈಸೆನ್ಸ ನೀಡಲು 10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದ ರಾಯಬಾಗ ತಾಲೂಕಿನ ಕುಡಚಿ ಎಪಿಎಂಸಿ ಕಾರ್ಯದರ್ಶಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಬೆಳಗಾವಿಯ 4ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಹೌದು ಕುಡಚಿ ಎಪಿಎಂಸಿ ಕಾರ್ಯದರ್ಶಿ ಸುರಪ್ಪ ಹಾಂಕಪ್ಪ ಲಮಾಣಿ ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದು ಶಿಕ್ಷೆಗೆ ಒಳಗಾಗಿರುವ ಅಧಿಕಾರಿ. ಎಪಿಎಂಸಿ ಕಾರ್ಯದರ್ಶಿ ಸುರಪ್ಪ ಲಮಾಣಿ ಡಿಸೆಂಬರ್ 24 2016ರಂದು ರಾಯಬಾಗ ತಾಲೂಕಿನ ಜಲಾಲಪುರ ಗ್ರಾಮದ ಮಹಾದೇವ ಸುರೇಶ್ ಚೌಗುಲೆ ಎಂಬುವವರ ಬಳಿ ರಫ್ತುದಾರರ ಮತ್ತು ಸಂಗ್ರಹಣಕಾರರ ಲೈಸೆನ್ಸ ನೀಡಲು 10 ಸಾವಿರ ರೂಪಾಯಿಗೆ ಲಂಚಕ್ಕೆ ಬೇಡಿಕೆ ಇಟ್ಟು ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಹಣದ ಸಮೇತ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದರು. ಎಸಿಬಿ ಉಪ ಅಧೀಕ್ಷಕ ರಘು.ಜೆ ಅವರು ಈ ಬಗ್ಗೆ ಕೇಸ್ ದಾಖಲಿಸಿಕೊಂಡಿದ್ದರು. ಎಸಿಬಿ ಸಿಪಿಐ ವಾಯ್.ಎಸ್.ಧರನಾಯಿಕ್ ತನಿಖಾಧಿಕಾರಿಯಾಗಿ ರವಿ ಮಾವರಕರ್ ಸಿಎಚ್‍ಸಿ ತನಿಖಾ ಸಹಾಯಕರಾಗಿ ಕೇಸ್‍ನ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪನಾ ಪಟ್ಟಿ ಸಲ್ಲಿಸಿದ್ದರು. ಇಂದು ಗುರುವಾರ ಈ ಪ್ರಕರಣದ ವಿಚಾರಣೆ ನಡೆಸಿದ ಬೆಳಗಾವಿಯ 4ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ವ್ಹಿ.ವಿಜಯ್ ಅವರು ಆರೋಪಿ ಎಪಿಎಂಸಿ ಕಾರ್ಯದರ್ಶಿ ಸುರಪ್ಪ ಲಮಾಣಿ ತಪ್ಪಿತಸ್ಥ ಎಂದು ತೀರ್ಪು ನೀಡಿ, ಒಟ್ಟು ಏಳು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 15 ಸಾವಿರ ರೂಪಾಯಿ ದಂಡ ಇಲ್ಲವೇ 7 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರ ವಿಶೇಷ ಸರಕಾರಿ ಅಭಿಯೋಜಕರಾಗಿ ಪ್ರವೀಣ ಅಗಸಗಿ ವಾದ ಮಂಡಿಸಿದ್ದರು. ಬೆಳಗಾವಿ ಉತ್ತರ ವಲಯದ ಎಸಿಬಿ ಪೊಲೀಸ್ ಅಧೀಕ್ಷಕರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

Tags:

error: Content is protected !!