ಗಾನ ಕೋಗಿಲೆ, ಕಂಚಿನ ಕಂಠದ ಗಾಯಕಿ, ಸಂಗೀತ ಲೋಕದ ಸಾಮ್ರಾಜ್ಞಿ ಇನ್ನು ನೆನಪು ಮಾತ್ರ. ಪಂಚಭೂತಗಳಲ್ಲಿ ಲತಾ ಮಂಗೇಶ್ಕರ್ ಅವರು ಲೀನರಾಗಿದ್ದು. ಸಕಲ ಸರ್ಕಾರಿ ಗೌರವದೊಂದಿಗೆ ಲತಾಜಿ ಅಂತ್ಯಕ್ರಿಯೆ ನೆರವೇರಿತು. ಪ್ರಧಾನಿ ಮೋದಿ ಆಗಮಿಸಿ ಗಾನ ಸರಸ್ವತಿಯ ಅಂತಿಮ ದರ್ಶನ ಪಡೆದುಕೊಂಡರು.

ಭಾರತ ರತ್ನ ಲತಾ ಮಂಗೇಶ್ಕರ್ ಇಂದು ಮುಂಜಾನೆ 8.12ರ ಸುಮಾರಿಗೆ ಇಹಲೋಕ ತ್ಯಜಿಸಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು. ಲತಾ ಮಂಗೇಶ್ಕರ್ ಅವರು ನಿಧನ ಹೊಂದಿರುವ ವಿಚಾರ ಇಡೀ ದೇಶಕ್ಕೆ ದುಃಖ ತಂದಿದೆ. ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರವನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಮುಂಬೈನ ಅವರ ನಿವಾಸ ಪ್ರಭು ಕುಂಜ್‍ಗೆ ಕೊಂಡೊಯ್ಯಲಾಗಿತ್ತು. ಇಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಲತಾಜಿ ಅಂತಿಮ ದರ್ಶನ ಪಡೆದುಕೊಂಡರು. ಇಲ್ಲಿಂದ ನೇರವಾಗಿ ಅಂತ್ಯಕ್ರಿಯೆ ನಡೆಯಲಿರುವ ಶಿವಾಜಿ ಪಾರ್ಕ್‍ಗೆ ಸೇನಾ ವಾಹನದಲ್ಲಿ ಲತಾಜಿ ಪಾರ್ಥಿವ ಶರೀರದ ಅಂತಿಮ ಯಾತ್ರೆ ನಡೆಯಿತು. ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ಜನರು ನಿಂತು ಗಾನ ಸರಸ್ವತಿಯ ಅಂತಿಮ ದರ್ಶನ ಪಡೆದುಕೊಂಡರು. ಬಳಿಕ ಅಂತಿಮ ಯಾತ್ರೆ ಶಿವಾಜಿ ಪಾರ್ಕ ತಲುಪಿತು. ಈ ವೇಳೆ ಕೆಲ ಹೊತ್ತು ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಲತಾಜಿ ಪಾರ್ಥಿವ ಶರೀರದ ಮೇಲೆ ಹೂಗುಚ್ಛ ಇಟ್ಟು ಅಂತಿಮ ನಮನ ಸಲ್ಲಿಸಿದರು.

ಅದೇ ರೀತಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್, ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್, ಡಿಸಿಎಂ ಅಜಿತ್ ಪವಾರ್ ಹಾಗೂ ರಾಜಕೀಯ ನಾಯಕರು, ಬಾಲಿವುಡ್, ಕ್ರಿಕೆಟ್ ಗಣ್ಯರು ಕೂಡ ಅಂತಿಮ ದರ್ಶನ ಪಡೆದುಕೊಂಡರು. ಬಳಿಕ ಪೊಲೀಸ್ ಬ್ಯಾಂಡ್ ಹಾಗೂ ಗಾಳಿಯಲ್ಲಿ ಮೂರು ಸುತ್ತಿನ ಗುಂಡು ಹಾರಿಸುವ ಮೂಲಕ ಭಾರತೀಯ ಸೇನೆಯ ಮೂರು ಘಟಕಗಳು ಲತಾಜಿಗೆ ಗೌರವ ಸಮರ್ಪಿಸಿದವು. 8 ಅರ್ಚಕರು ಲತಾ ಮಂಗೇಶ್ಕರ್ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಲತಾ ಸಹೋದರ ಹೃದಯನಾಥ್ ಅವರ ಮಗ ವಿಧಿ ವಿಧಾನಗಳು ಪೂರ್ಣಗೊಳಿಸಿದರು. ಹಿಂದೂ ಧಾರ್ಮಿಕ ವಿಧಿವಿಧಾನಗಳ ಮೂಲಕ ನಡೆಯಿತು. ನಂತರ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಒಟ್ಟಿನಲ್ಲಿ ಭೌತಿಕವಾಗಿ ಇಂದು ಲತಾಜಿ ನಮ್ಮನ್ನು ಬಿಟ್ಟು ಅಗಲಿರಬಹುದು ಆದರೆ ಅವರ ಸಾವಿರಾರು ಅತ್ಯದ್ಭುತ ಹಾಡುಗಳ ಮೂಲಕ ಎಂದೆಂದಿಗೂ ಅಜರಾಮರ ಆಗಿರುತ್ತಾರೆ.