ಹಿಜಾಬ್ ವಿವಾದ ನ್ಯಾಯಾಲಯದಲ್ಲಿದೆ ನ್ಯಾಯಾಧೀಶರು ಯಾವ ತೀರ್ಪು ನೀಡುತ್ತಾರೆ ಅದಕ್ಕೆ ನಾವು ತಲೆಬಾಗುತ್ತೇವೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಶುಕ್ರವಾರ ಕಾಗವಾಡದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 2019-20ನೇ ಸಾಲಿನಲ್ಲಿ 80 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ 14 ಮಳಿಗೆಗಳನ್ನು ಎಂಎಲ್‍ಸಿ ಲಕ್ಷ್ಮಣ ಸವದಿ ಉದ್ಘಾಟಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದ ವೇಳೆ ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಯಿಸಿದ ಲಕ್ಷ್ಮಣ ಸವದಿ ಅದು ಅವರ ವಯಕ್ತಿಕ ಭಾವನೆಯಾಗಿದೆ. ಕೇಸರಿ ಹಿಂದುತ್ವದ ಸಂಕೇತವಾಗಿದೆ. ಕೇಸರಿ ಧ್ವಜ ಕೇವಲ ಹಿಂದೂಗಳಿಗೆ ಸಿಮೀತ ಅಲ್ಲ. ಕೇಸರಿ ತ್ಯಾಗದ ಸಂಕೇತ. ಯಾರಲ್ಲಿ ತ್ಯಾಗದ ಮನೋಭಾವ ಇರುತ್ತದೆಯೋ ಅಂತವರು ಆ ಉಡುಪನ್ನು ತೊಡಬೇಕಾಗುತ್ತದೆ. ದೇಶಕ್ಕಾಗಿ, ಜನಕ್ಕಾಗಿ, ಸಮಾಜಕ್ಕಾಗಿ ತ್ಯಾಗ ಮಾಡುತ್ತೇನೆ ಎನ್ನುವವರು ಧರಿಸುವುದು ಕೇಸರಿ ವಸ್ತ್ರ ಎಂದು ಸಮರ್ಥಿಸಿಕೊಂಡರು.
ಇನ್ನು ಹೈಕೋರ್ಟನಲ್ಲಿ ವಾದ, ವಿವಾದ ಪ್ರಾರಂಭವಾಗಿದೆ. ನಿನ್ನೆ ಮಧ್ಯಂತರ ಆದೇಶ ಕೂಡ ಬಂದಿದೆ. ನಾವೆಲ್ಲರೂ ಸಂವಿಧಾನ ಮತ್ತು ನ್ಯಾಯಾಲಯಕ್ಕೆ ಗೌರವ ಕೊಡುವ ಜನ. ಹೀಗಾಗಿ ಕೊನೆಯ ಆದೇಶ ಬರೋವರೆಗೂ ನಾವು ಕಾಯಬೇಕಿದೆ. ಈಗ ಬಂದಿರುವ ಮಧ್ಯಂತರ ಆದೇಶವನ್ನು ಗೌರವಿಸಬೇಕಾಗುತ್ತದೆ. ಹೈಕೋರ್ಟನಿಂದ ಬರುವ ತೀರ್ಪಿಗೆ ಅನುಗುಣವಾಗಿ ನಾವು ನಡೆದುಕೊಳ್ಳಬೇಕು ಎಂದರು.
ಒಟ್ಟಿನಲ್ಲಿ ಕೇಸರಿ ತ್ಯಾಗದ ಸಂಕೇತ ಹೀಗಾಗಿ ಅದನ್ನು ಎಲ್ಲಿ ಬೇಕಾದ್ರೂ ಹಾರಿಸಬಹುದು ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸಮರ್ಥಿಸಿಕೊಂಡರು.