ರಾಜ್ಯದ ಏಳು ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಏಳೂ ಸಚಿವರಿಗೂ ರಾಜ್ಯಪಾಲರಾದ ವಿ.ಆರ್.ವಾಲಾ ಅವರು ಪ್ರಮಾಣ ವಚನ ಬೋಧಿಸಿದರು. ಈ ಮೂಲಕ ಸಿಎಂ ಬಿಎಸ್ ಯಡಿಯೂರಪ್ಪ ಕ್ಯಾಬಿನೇಟ್ಗೆ ಮತ್ತೆ ಏಳು ಸಚಿವರು ಸೇರ್ಪಡೆಯಾದಂತಾಗಿದೆ.
ಹೌದು ಕಳೆದ ಹಲವಾರು ತಿಂಗಳಿನಿಂದ ಸಚಿವ ಸಂಪುಟ ವಿಸ್ತರಣೆ ಕಗ್ಗಂಟಾಗಿಯೇ ಉಳಿದಿತ್ತು. ಕಡೆಗೂ ಸಂಪುಟ ವಿಸ್ತರಣೆಗೆ ಬುಧವಾರ ಮೂಹೂರ್ತ ಫಿಕ್ಸ್ ಆದ ಹಿನ್ನೆಲೆ ಮಧ್ಯಾಹ್ನ 3.50ರ ಸುಮಾರಿಗೆ ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ನೂತನ ಸಂಪುಟ ದರ್ಜೆ ಸಚಿವರಾಗಿ ಉಮೇಶ ಕತ್ತಿ, ಅರವಿಂದ ಲಿಂಬಾವಳಿ, ಮುರುಗೇಶ್ ನಿರಾಣಿ, ಎಂಟಿಬಿ ನಾಗರಾಜ್, ಆರ್.ಶಂಕರ್, ಸಿಪಿ ಯೋಗೀಶ್ವರ, ಎಸ್.ಅಂಗಾರ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಏಳೂ ನೂತನ ಸಚಿವರಿಗೂ ರಾಜ್ಯಪಾಲ ವಿ.ಆರ್.ವಾಲಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಮೊದಲಿಗೆ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿ ಹಿರಿಯ ಶಾಸಕ ಉಮೇಶ ಕತ್ತಿ ದೇವರು ಮತ್ತು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಮೂರನೇ ಬಾರಿಗೆ ಉಮೇಶ ಕತ್ತಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದಂತಾಯಿತು.
ಇದಾದ ಬಳಿಕ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇದರಿಂದ ಅರವಿಂದ ಲಿಂಬಾವಳಿ ಮೂರನೇ ಬಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.
ನಂತರ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇವರು ಕೂಡ ಎರಡನೇ ಬಾರಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಇದಾದ ಬಳಿಕ ಬಾಗಲಕೋಟೆ ಜಿಲ್ಲೆಯ ಬೀಳಗಿ ಮತಕ್ಷೇತ್ರದ ಶಾಸಕ ಮುರುಗೇಶ್ ನಿರಾಣಿ ದೇವರು ಮತ್ತು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇವರು ಕೂಡ 2ನೇ ಬಾರಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದಂತಾಯಿತು.
ನಂತರ ವಿಧಾನಪರಿಷತ್ ಸದಸ್ಯ ಆರ್.ಶಂಕರ್ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಆರ್.ಶಂಕರ್ ಕೂಡ ಎರಡನೇ ಬಾರಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದಂತಾಯಿತು.
ಬಳಿಕ ಇನ್ನೊರ್ವ ವಿಧಾನಪರಿಷತ್ ಸದಸ್ಯರಾಗಿರುವ ಸಿ.ಪಿ.ಯೋಗೀಶ್ವರ ದೇವರ ಹೆಸರಿನಲ್ಲಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಇದರಿಂದ ಯೋಗೀಶ್ವರ ಕೂಡ ಎರಡನೇ ಬಾರಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಅಂತಿಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕ್ಷೇತ್ರದ ಶಾಸಕ ಎಸ್.ಅಂಗಾರ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಎಸ್.ಅಂಗಾರ ಮೊದಲ ಬಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.
ಒಟ್ಟಾರೆ ಸಂಪುಟ ವಿಸ್ತರಣೆಯ ಹಲವು ದಿನಗಳ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದ್ದು. ಹಲವು ಅಸಮಾಧಾನ, ಭಿನ್ನಮತಗಳ ನಡುವೆ ಏಳು ಶಾಸಕರನ್ನು ಸಿಎಂ ಬಿಎಸ್ವೈ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಆದ್ರೆ ಸಚಿವ ಸ್ಥಾನ ಸಿಗದೇ ಮುನಿಸಿಕೊಂಡಿರುವ ವಲಸಿಗ, ಮೂಲ ಬಿಜೆಪಿ ನಾಯಕರನ್ನು ಮುಖ್ಯಮಂತ್ರಿಗಳು ಯಾವ ರೀತಿ ಸಮಾಧಾನ ಮಾಡುತ್ತಾರೆ ಎಂಬುದು ಸಧ್ಯ ಎಲ್ಲರನ್ನೂ ಯಕ್ಷಪ್ರಶ್ನೆಯಾಗಿದೆ ಕಾಡುತ್ತಿದೆ.