ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿ ಬೆಳಗಾವಿಗೆ ಬಂದ ಸಚಿವ ಉಮೇಶ ಕತ್ತಿ ಅವರಿಗೆ ತವರು ಜಿಲ್ಲೆಯ ಕೇಂದ್ರದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ಸಚಿವ ಉಮೇಶ ಕತ್ತಿ ಚನ್ನಮ್ಮ ವೃತ್ತದಲ್ಲಿ ರಾಣಿ ಚನ್ನಮ್ಮನಿಗೆ ಹೂ ಹಾರ ಅರ್ಪಿಸಿ ಗೌರವದಿಂದ ನಮಿಸಿ ನಂತರ ಕಾರ್ಯಕರ್ತರ ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿದರು.
ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿ ಬೆಳಗಾವಿಗೆ ಆಗಮಿಸಿದ ಸಚಿವ ಉಮೇಶ ಕತ್ತಿ ಅವರಿಗೆ ತವರು ಜಿಲ್ಲೆಯ ಕೇಂದ್ರವಾದ ಬೆಳಗಾವಿ ನಗರದಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹೂ ಗುಚ್ಛ ನೀಡಿ ಅಭಿನಂದಿಸಿ ಆದರದಿಂದ ಬರಮಾಡಿಕೊಂಡರು. ಸಚಿವ ಉಮೇಶ ಕತ್ತಿ ರಾಣಿ ಚನ್ನಮ್ಮನಿಗೆ ಹೂ ಹಾರ ಅರ್ಪಿಸಿ ಗೌರವ ಸಮರ್ಪಿಸಿ ನಂತರ ಕಾರ್ಯಕರ್ತರ ಸಂಭ್ರಮದ ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಜಿಲ್ಲೆಯ ಹಿರಿಯ ನಾಯಕ ಉಮೇಶ ಕತ್ತಿ ಸಚಿವರಾಗಬೇಕು ಎಂಬುದು ಬಹುದಿನಗಳ ಆಸೆಯಾಗಿತ್ತು. ಅದೀಗ ಈಡೇರಿದೆ. ಅವರ ಅನುಭವವನ್ನು ಬಳಸಿಕೊಂಡು ರಾಜ್ಯ ಸರ್ಕಾರ, ಜಿಲ್ಲೆ ಅಭಿವೃದ್ಧಿಯತ್ತ ಮುನ್ನಡೆಯುತ್ತವೆ ಎಂಬ ವಿಶ್ವಾಸ ಇದೆ. ಯಾವ ಖಾತೆ ಕೊಟ್ಟರೂ ನಿಭಾಯಿಸುವ ಶಕ್ತಿ ಅವರಿಗೆ ಇದೆ ಎಂದರು.
ಇನ್ನು ಸಚಿವ ಉಮೇಶ ಕತ್ತಿ ಮಾತನಾಡಿ, ರಾಜ್ಯ ಸಚಿವ ಸಂಪುಟದಲ್ಲಿ ಯಡಿಯೂರಪ್ಪ ನನಗೂ ಒಂದು ಅವಕಾಶ ನೀಡಿದ್ದಾರೆ. ಯಡಿಯೂರಪ್ಪ ಸರ್ಕಾರ ಇನ್ನೂ ಎರಡೂವರೆ ವರ್ಷ ಸುಭದ್ರವಾಗಿರುತ್ತದೆ. ಇದುವರೆಗೂ ನಾನು 5-6 ಖಾತೆ ನಿರ್ವಹಿಸಿದ ಅನುಭವ ಹೊಂದಿದ್ದೇನೆ. ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ. ಬೆಳಗಾವಿ ಜಿಲ್ಲೆಯ 5 ಜನ ಮಂತ್ರಿಗಳು ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ ಎಂದರು.
ಒಟ್ಟಿನಲ್ಲಿ ಸಚಿವರಾಗಿ ಮೊದಲ ಬಾರಿ ಬೆಳಗಾವಿ ನಗರಕ್ಕೆ ಆಗಮಿಸಿದ ಸಚಿವ ಉಮೇಶ ಕತ್ತಿ ಅವರಿಗೆ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿ ಅಭಿಮಾನ ಮೆರೆದಿದ್ದಾರೆ.