Belagavi

ಶರಣರ ವಚನ ಹಾಗೂ ಕನ್ನಡ ಸಾಹಿತ್ಯದ ಬಗ್ಗೆ ತಿಳಿಸಿ ಕನ್ನಡ ಭಾಷೆಯನ್ನು ಬೆಳೆಸಿ..ಮಂಗಲಾ ಮೆಟಗುಡ್ಡ

Share

ಬೆಳಗಾವಿ: ಕನ್ನಡ ದೇವ ಭಾಷೆ ಆಗಿದ್ದು, ಕನ್ನಡ ಭಾಷೆಯಲ್ಲಿ ಸಿಗುವ ಸಾಹಿತ್ಯ ಬೇರೆ ಯಾವ ಭಾಷೆಯಲ್ಲಿ ಸಿಗುವುದಿಲ್ಲ, ಅದಕ್ಕಾಗಿ ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ ಎಂದು ಜಿಲ್ಲಾ ಕ.ಸಾ.ಪ. ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಬೆಳಗಾವಿಯ ಕನ್ನಡ ಭವನದಲ್ಲಿ ಬುಧವಾರ ಜರುಗಿದ, ವಿವಿಧ ದತ್ತಿ ನಿಧಿಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು ಕನ್ನಡಿಗರಾದ ನಾವೆಲ್ಲರೂ ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ, ಮಾತ್ರ ನಾವು ಕನ್ನಡಾಂಭೆಗೆ ಕನ್ನಡ ಭಾಷೆಗೆ ಗೌರವ ನೀಡಿದಂತಾಗುತ್ತದೆ. ಮನೆಯಲ್ಲಿ ಮಕ್ಕಳಿಗೆ ಭಾಷೆಯ ಕುರಿತು, ಶರಣರ ವಚನ ಹಾಗೂ ಕನ್ನಡ ಸಾಹಿತ್ಯದ ಬಗ್ಗೆ ತಿಳಿಸಿ ಕನ್ನಡ ಭಾಷೆಯನ್ನು ಬೆಳೆಸಬೇಕು ಎಂದು ನುಡಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಸರದಾರ ಕಾಲೇಜಿನ ಪ್ರಾದ್ಯಾಪಕ ಸಿ.ಜಿ.ಮಠಪತಿ ಹಾನಗಲ್ ಕುಮಾರ ಸ್ವಾಮಿಗಳ ಸಾಮಾಜಿಕ ಚಿಂತನೆ ಕುರಿತು, ಮಾತನಾಡಿ ಸಮಾಜಕ್ಕೆ ಹಾನಗಲ್ ಕುಮಾರ ಸ್ವಾಮೀಜಿಯವರ ಕೊಡುಗೆ ಅಪಾರವಾಗಿದೆ. ಒಳ್ಳೆಯ ಆಚಾರ ವಿಚಾರಗಳನ್ನು ಹೊಂದಿ ಸಾಮಾಜಿಕ ಚಿಂತನೆಯನ್ನು ಅಳವಡಿಸಿಕೊಂಡು, ಸಮಾಜದ ಉದ್ಧಾರವನ್ನೇ ಬಯಸಿದ ಶ್ರೀಗಳು ಸಾಹಿತ್ಯ, ಧಾರ್ಮಿಕ ಶೈಕ್ಷಣಿಕ, ಸಂಗೀತ ಮುಂತಾದ ಕಾರ್ಯಗಳನ್ನು ಏರ್ಪಡಿಸಿ ಸಮಾಜದ ಉದ್ಧಾರಕ್ಕಾಗಿ ಸದಾ ಶ್ರಮಿಸಿದ ಮಹಾನ್‍ಯೋಗಿಯಾಗಿದ್ದಾರೆ. ಸಮಾಜಕ್ಕೆ ಹಾನಗಲ್ ಕುಮಾರ ಸ್ವಾಮೀಜಿಯವರ ಕೊಡುಗೆ ಅಪಾರವಾಗಿದೆ ಎಂದರು.

ನಿವೃತ್ತ ಶಿಕ್ಷಕಿ ಅಕ್ಕಮಹಾದೇವಿ ತೆಗ್ಗಿ ಅವರು ಶರಣರು ಮತ್ತು ವಚನ ಸಾಹಿತ್ಯ ಕುರಿತು ಉಪನ್ಯಾಸ ನೀಡಿ 12ನೇ ಶತಮಾನದಲ್ಲಿ ಶರಣರು ವಚನ ಸಾಹಿತ್ಯ ಮೂಲಕ ಸಮಾಜದ ಉದ್ಧಾರ ಮಾಡಿದ್ದಾರೆ. ಶರಣರ ವಚನ ಸಾಹಿತ್ಯ, ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದೆ. ಅಂತಹ ವಚನ ಸಾಹಿತ್ಯವನ್ನು ನಾವು ಮಕ್ಕಳಿಗೆ ಹೇಳಿ ಶರಣರ ವಚನ ಸಾಹಿತ್ಯದ ಬಗ್ಗೆ ಅರಿವು ಮೂಡಿಸಬೇಕು. ಅಂದಾಗ ಮಾತ್ರ ವಚನ ಸಾಹಿತ್ಯ ಬೆಳೆಯುತ್ತದೆ ಎಂದು ನುಡಿದರು.

ಎಸ್.ವ್ಹಿ.ಬಾಗಿ, ಡಾ.ಸ.ಜ.ನಾಗಲೋಟಿಮಠ, ಜ್ಯೋತಿ ಮೂಗಿ ,ಡಾ.ಕೃಷ್ಣಶರ್ಮ ಬೆಟಗೇರಿ,ಮರಿಕಲ್ಲಪ್ಪ ಮಲಶೆಟ್ಟಿ, ನೇಮಿನಾಥ ಇಂಚಲ ಇವರ ನೆನಪಿಗಾಗಿ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮ ಜರುಗಿತು. ಶಿವಲೀಲಾ ಬಾಗಿ, ಶಾಂತಕ್ಕ ನಾಗಲೋಟಿಮಠ, ಸುನಿತಾ ಮೂಗಿ, ಪ್ರಕಾಶ ದೇಶಪಾಂಡೆ, ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಮಹಿಳಾ ಮಂಡಳಗಳ ಸದಸ್ಯರು ಭಕ್ತಿಗೀತೆ, ಭಾವಗೀತೆ,ಲಾವಣಿ, ಗೀಗಿಪದ ಮುಂತಾದ ಹಾಡುಗಳನ್ನು ಹಾಡಿದರು. ಭಾವಗೀತೆಗಳನ್ನು ಹಾಡಿದ ಮಕ್ಕಳಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು. ಪಾರ್ವತಿ ಪಾಟೀಲ, ಶಶಿಕಲಾ ಯಲಿಗಾರ,ಶ್ರೀರಂಗ ಜೋಶಿ,ಶಿವಾನಂದ ತಲ್ಲೂರ ಸೇರಿದಂತೆ ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು. ಡಾ.ಹೇಮಾವತಿ ಸೊನೊಳ್ಳಿ ಸ್ವಾಗತಿಸಿದರು, ಎಂ.ವಾಯ್.ಮೆಣಸಿನಕಾಯಿ ದತ್ತಿಗಳನ್ನು ಪರಿಚಯಿಸಿದರು. ರತ್ನಪ್ರಭಾ ಬೆಲ್ಲದ ವಂದಿಸಿದರು, ಜ್ಯೋತಿ ಬದಾಮಿ ನಿರೂಪಿಸಿದರು.

 

Tags:

error: Content is protected !!