Belagavi

ರೈತ, ಕಾರ್ಮಿಕ, ಜನ ವಿರೋಧಿ ನೀತಿ ಖಂಡಿಸಿ ಕೇಂದ್ರದ ವಿರುದ್ಧ ಕೃಷಿಕ ಸಮಾಜ, ರೈತ ಸಂಘ ಪ್ರತಿಭಟನೆ

Share

ರೈತ ಹಾಗೂ ಕಾರ್ಮಿಕ ವಿರೋಧಿ ನೀತಿ ಕೈಬಿಡಬೇಕು ಎಂದು ಆಗ್ರಹಿಸಿ ಭಾರತೀಯ ಕೃಷಿಕ ಸಮಾಜ ಹಾಗೂ ಕೃಷಿ ಕೂಲಿ ಕೆಲಸಕ್ಕೆ ಮಾರಕವಾದ ರೋಜಗಾರ ಯೋಜನೆ ಕೈಬಿಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು, ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಭಾರತೀಯ ಕೃಷಿಕ ಸಮಾಜದ ಮುಖಂಡರು, ಕಾರ್ಯಕರ್ತರು, ಕೇಂದ್ರ ಸರ್ಕಾರ ತರಾತುರಿಯಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ ಕೃಷಿ ಸಂಬಂಧಿತ ಮಸೂದೆ, ವಿದ್ಯುತ್ ಖಾಸಗೀಕರಣ, ಕಾರ್ಮಿಕ ವಿರೋಧಿ ಕಾಯ್ದೆ ಹಾಗೂ ಕರ್ನಾಟಕದ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದಗೌಡ ಮೋದಗಿ ಮಾತನಾಡಿ, ಕೇಂದ್ರ ಸರ್ಕಾರ ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನ ವಿರೋಧಿ ನೀತಿ ಮೂಲಕ ಜನರಿಗೆ ಸಂಕಷ್ಟ ತಂದೊಡ್ಡಲು ಮುಂದಾಗಿದೆ. ಕೃಷಿ ಸಂಬಂಧಿತ ಮಸೂದೆಗಳು ರೈತರ ಹಿತಕ್ಕೆ ಮಾರಕವಾಗಿವೆ. ಖಾಸಗೀಕರಣ ನೀತಿಯ ಮೂಲಕ ಕಾರ್ಮಿಕರ ಶೋಷಣೆ ಮುಂದುವರಿಸಲು ಹುನ್ನಾರ ನಡೆದಿದೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಮೂಲಕ ರೈತರ ಭೂಮಿ ಕಸಿದುಕೊಳ್ಳುವ ಪ್ರಯತ್ನ ಆರಂಭಿಸಲಾಗಿದೆ. ಸರ್ಕಾರ ಕೂಡಲೇ ರೈತ, ಕಾರ್ಮಿಕ, ಜನ ವಿರೋಧಿ ನೀತಿಗಳನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಭಾರತೀಯ ಕೃಷಿಕ ಸಮಾಜದ ಅಖಿಲಾ ಪಠಾಣ್ ಮಾತನಾಡಿ, ಕೇಂದ್ರ ಸರ್ಕಾರ ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನ ವಿರೋಧಿ ನೀತಿ ಅನುಸರಿಸುತ್ತ ಜನರ ಬದುಕನ್ನು ಕತ್ತಲೆಗೆ ನೂಕುತ್ತಿದೆ. ಬಡವರನ್ನು ಶೋಷಿಸಲಾಗುತ್ತಿದೆ. ಕೂಡಲೇ ಸರ್ಕಾರ ತಪ್ಪು ತಿದ್ದಿಕೊಳ್ಳಬೇಕು. ಜನವಿರೋಧಿ ನೀತಿ ಕೈಬಿಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮೀರಾ ಬೈರಣ್ಣವರ, ಸಿ.ಎಸ್.ಬಿಡ್ನಾಳ, ತಾನಾಜಿ ಹಲಗೇಕರ ಮತ್ತಿತರರು ಇದ್ದರು.
ಇನ್ನು ಕೃಷಿಗೆ ಮಾರಕವಾದ ರೋಜಗಾರ ಯೋಜನೆಯನ್ನು ಕೈಬಿಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು, ಕಾರ್ಯಕರ್ತರು, ಸಂಘಟನೆಯ ಅಧ್ಯಕ್ಷ ಅಪ್ಪಾಸಾಹೇಬ ದೇಸಾಯಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಅಪ್ಪಾಸಾಹೇಬ ದೇಸಾಯಿ ಮಾತನಾಡಿ, ರೋಜಗಾರ ಯೋಜನೆಯಿಂದಾಗಿ ಕೃಷಿ ಕೂಲಿಗೆ ಜನರು ಸಿಗುತ್ತಿಲ್ಲ. ಜನರನ್ನು ಕೃಷಿ ಕೂಲಿಯಿಂದ ಬಿಡಿಸಲು ರೋಜಗಾರ ಯೋಜನೆ ಜಾರಿಗೊಳಿಸಲಾಗಿದೆ. ಕೃಷಿಗೆ ಮಾರಕವಾದ ರೋಜಗಾರ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ರೈತ ಸಂಘದ ರಾಮನಗೌಡ ಪಾಟೀಲ, ನಾಮದೇವ ದುಡುಂ, ಮಾರುತಿ ಕಡೇಮನಿ, ದುಂಡಪ್ಪ ಪಾಟೀಲ,. ಗಜು ರಾಜಾಯಿ, ರಾಜು ಕಾಗಣೇಕರ, ಮಹಾದೇವಿ ಪಾಟೀಲ, ಬಸವ್ವ ಬೈರಿ ಮತ್ತಿತರರು ಪಾಲ್ಗೊಂಡಿದ್ದರು.

Tags:

error: Content is protected !!