Belagavi

ರಾಷ್ಟ್ರೀಯ ಪಲ್ಸ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಸೂಚನೆ: ಪೂರ್ವ ಸಿದ್ಧತೆ ಪರಿಶೀಲನೆ

Share

ಜನವರಿ 17ರಂದು ರಾಷ್ಟ್ರೀಯ ಪಲ್ಸ ಪೋಲಿಯೋ ಕಾರ್ಯಕ್ರಮದ ಅಂಗವಾಗಿ 5 ವರ್ಷದ ಎಲ್ಲ ಮಕ್ಕಳಿಗೂ ಪಲ್ಸ್ ಪೋಲಿಯೋ ಲಸಿಕೆ ನೀಡಲು ಎಲ್ಲ ಸಿದ್ಧತೆ ಪೂರ್ಣಗೊಳಿಸಬೇಕು. ಯಾವ ಮಕ್ಕಳೂ ಪೋಲಿಯೋ ಲಸಿಕೆಯಿಂದ ವಂಚಿತವಾಗಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಸೂಚನೆ ನೀಡಿದರು.

ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ, ಶಿಕ್ಷಣ, ಮಹಿಳಾ ಮತ್ತು ಕಲ್ಯಾಣ ಸೇರಿ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಮಾತನಾಡಿ, ರಾಷ್ಟ್ರೀಯ ಪೋಲಿಯೋ ಲಸಿಕೆ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. 5 ವರ್ಷದೊಳಗಿನ ಯಾವ ಮಕ್ಕಳೂ ಪೋಲಿಯೋ ಲಸಿಕೆಯಿಂದ ವಂಚಿತರಾಗಬಾರದು. ಜನವರಿ 17ರ ನಂತರದ ಎರಡು ದಿನ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಆಗಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಪೋಲಿಯೋ ಲಸಿಕೆ ನೀಡಬೇಕು ಎಂದರು.

ಇದಕ್ಕೂ ಮೊದಲು ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮದ ಪೂರ್ವ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಮಾತನಾಡಿ, ಜಿಲ್ಲೆಯಲ್ಲಿ 5 ವರ್ಷದೊಳಗಿನ 5,10,000 ಮಕ್ಕಳನ್ನು ಗುರುತಿಸಲಾಗಿದೆ. 9,77,000 ಮನೆಗಳನ್ನು ಗುರುತು ಮಾಡಲಾಗಿದ್ದು, ಮಕ್ಕಳಿಗೆ ಲಸಿಕೆ ನೀಡಲು ಎಲ್ಲ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ಜನವರಿ 16ರಂದು ಶಾಲೆ, ಅಂಗನವಾಡಿಗಳಲ್ಲಿ ಜಾಗೃತಿ ನಡೆಸಿ ಪೋಲಿಯೋ ಲಸಿಕೆಯ ಮಹತ್ವ ಮನವರಿಕೆ ಮಾಡಿಕೊಡಲಾಗುವುದು. ಜನವರಿ 17ರಂದು ಬೂತ್‍ಗಳಲ್ಲಿ ಪೋಲಿಯೋ ಲಸಿಕೆ ನೀಡಲಾಗುವುದು. ಜಿಲ್ಲೆ, ತಾಲೂಕು ಮಟ್ಟದಲ್ಲಿ ಇದಕ್ಕಾಗಿ ತಂಡ ರಚಿಸಲಾಗಿದೆ. ಒಂದು ಬೂತ್‍ನಲ್ಲಿ 4-5 ಜನ ಸಿಬ್ಬಂದಿ ಕೆಲಸ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ. ಜನವರಿ 18, 19ರಂದು ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಪೋಲಿಯೋ ಲಸಿಕೆ ನೀಡಲಿದ್ದಾರೆ ಎಂದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ್, ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ, ಪಾಲಿಕೆ ಆರೋಗ್ಯಾಧಿಕಾರಿ ಗಡಾದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Tags:

error: Content is protected !!