ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಸ್ಥಾಪಿಸಿರುವ ಕನ್ನಡ ಧ್ವಜ ಸ್ತಂಭಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಧ್ವಜದ ರಕ್ಷಣೆ ಸಂಬಂಧ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
: ಹೌದು ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜವನ್ನು ಹಾರಿಸಬೇಕು ಎನ್ನುವುದು ಹಲವು ವರ್ಷಗಳ ಕನ್ನಡಿಗರ ಕನಸಾಗಿತ್ತು. ಇದೇ ಡಿ.28ರಂದು ಕನ್ನಡ ಹೋರಾಟಗಾರ ಶ್ರೀನಿವಾಸ್ ತಾಳೂಕರ್ ನೇತೃತ್ವದಲ್ಲಿ ಕನ್ನಡ ಧ್ವಜವನ್ನು ಹಾರಿಸುವ ಮೂಲಕ ಕನ್ನಡಿಗರ ಬಹುದಿನಗಳ ಕನಸು ಈಡೇರಿದಂತಾಗಿತ್ತು. ಆದ್ರೆ ಇದಕ್ಕೆ ನಾಡದ್ರೋಹಿ ಎಂಇಎಸ್ ಮುಖಂಡರು ವಿರೋಧ ವ್ಯಕ್ತಪಡಿಸಿ ಡಿ.31ರೊಳಗೆ ಕನ್ನಡ ಧ್ವಜವನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು.
ಅಷ್ಟೇ ಅಲ್ಲದೇ ಇದೇ ವೇಳೆ ನಾಡದ್ರೋಹಿಗಳು ಜಿಲ್ಲಾಡಳಿತ ಕನ್ನಡ ಧ್ವಜ ತೆರವುಗೊಳಿಸದೇ ಹೋದ್ರೆ ನಾವೇ ಕನ್ನಡ ಧ್ವಜ ತೆಗೆದು ಭಗವಾ ಧ್ವಜ ಹಾರಿಸುತ್ತೇವೆ ಎಂದು ನಾಲಿಗೆ ಹರಿಬಿಟ್ಟಿದ್ದರು. ಇಂದು ಜ.1ರಂದು ಕೂಡ ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಸ್ವತಂತ್ರವಾಗಿ ಹಾರಾಡುತ್ತಿದೆ. ಇದರಿಂದ ಯಾವುದೇ ರೀತಿ ಅಹಿತಕರ ಘಟನೆ ಸಂಭವಿಸದಂತೆ ಕನ್ನಡ ಧ್ವಜ ಸ್ತಂಭದ ಸುತ್ತಮುತ್ತಲೂ ಬ್ಯಾರಿಕೇಡ್ ಅಳವಡಿಸಿ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ರಕ್ಷಣೆಗೆ ನಿಯೋಜಿಸಲಾಗಿದೆ.
ಈ ಧ್ವಜ ವಿವಾದ ಸಂಬಂಧ ಶನಿವಾರ ಎಂಇಎಸ್ ಮುಖಂಡರನ್ನು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಅವರು ಕರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಏನೇ ಆಗಲಿ ಕನ್ನಡ ನಾಡಿನಲ್ಲಿ ಕನ್ನಡ ಧ್ವಜ ಹಾರಿಸಲು ಯಾರಪ್ಪನ ಅಪ್ಪಣೆ, ಅನುಮತಿ ಬೇಕಿಲ್ಲ ಅಷ್ಟೇ ಅಲ್ಲದೇ ನಾಡದ್ರೋಹಿಗಳು ಒಂದು ವೇಳೆ ಧ್ವಜ ತೆರವುಗೊಳಿಸಲು ಮುಂದಾದ್ರೆ ಪರಿಣಾಮ ನೆಟ್ಟಗಿರಲ್ಲ ಎಂದು ಕನ್ನಡ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.