Belagavi

ಬೆಳಗಾವಿ ಕಿತ್ತೂರು ರಾಣಿ ಚನ್ನಮ್ಮ ಸಹಕಾರ ಬ್ಯಾಂಕ್ ದರೋಡೆ ಪ್ರಕರಣ: ಒಬ್ಬನ ಬಂಧನ, 22.51 ಲಕ್ಷ ರೂ. ವಸ್ತು ವಶ

Share

ಬೆಳಗಾವಿ ಮಹಾಂತೇಶ ನಗರದ ಕಿತ್ತೂರ ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿಮಿಟೆಡ್‍ನ ತಿಜೋರಿ ಕತ್ತರಿಸಿ ಚಿನ್ನಾಭರಣ, ನಗದು ದೋಚಿದ ಪ್ರಕರಣ ಭೇದಿಸಿರುವ ಮಾಳಮಾರುತಿ ಪೊಲೀಸರು ಒಬ್ಬನನ್ನು ಬಂಧಿಸಿ, ಚಿನ್ನಾಭರಣ, ನಗದು ಸೇರಿ 22.51 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ಮಹಾಂತೇಶ ನಗರದ ಕಿತ್ತೂರ ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್‍ನಲ್ಲಿ ಡಿಸೆಂಬರ್ 31ರಂದು ರಾತ್ರಿ ತಿಜೋರಿ ಕತ್ತರಿಸಿ ಚಿನ್ನಾಭರಣ, ನಗದು ದೋಚಲಾಗಿದೆ ಎಂದು ಮುತಗಾ ಗ್ರಾಮದ ನರೇಂದ್ರ ಬಸವರಾಜ ನೀಡಿದ ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು ದಾಂಡೇಲಿಯ ಸುಭಾಷ ನಗರದ ನಿವಾಸಿ ಮಜಫರ್ ಮಹಮ್ಮದ್ ಶೇಖ್ ಎಂಬುವವನನ್ನು ಬಂಧಿಸಿ ವಿಚಾರಣೆ ನಡೆಸಿದರು. ಬಂಧಿತನಿಂದ ಬ್ಯಾಂಕ್ ತಿಜೋರಿ ಮುರಿದು ದೋಚಿದ್ದ 15 ಲಕ್ಷ ರೂ. ಮೌಲ್ಯದ 301 ಗ್ರಾಂ ತೂಕದ ಬಂಗಾರದ ಆಭರಣ, 1,01650 ರೂ. ನಗದು ಮತ್ತು ಕೃತ್ಯಕ್ಕೆ ಬಳಸಿದ್ದ ಹಾರ್ಲೇ ಡೆವಿಡ್‍ಸನ್ ಮೋಟರ್ ಸೈಕಲ್‍ನ್ನು ವಶಪಡಿಸಿಕೊಂಡರು.

ಒಟ್ಟು 22 ಲಕ್ಷ 51 ಸಾವಿರದ 650 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿ ಮಜಫರ್ ಮಹಮ್ಮದ್ ಶೇಖ್ ಎಂಬುವವನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಬೆರಳಚ್ಚು ತಜ್ಞರ ವಿಭಾಗದ ಪೊಲೀಸ್ ಇನ್ಸಪೆಕ್ಟರ್ ಮಹಾದೇವ ಕುಂಬಾರ ಮತ್ತು ಸಿಬ್ಬಂದಿ, ಪೊಲೀಸ್ ಇನ್ಸಪೆಕ್ಟರ್ ಹೊನ್ನಪ್ಪ ತಳವಾರ್, ಎಎಸ್‍ಐ ದಂಡಗಿ, ಎಂ.ಜಿ.ಕುರೇರ, ಕೆ.ಬಿ.ಗೌರಾಣಿ, ಜೆ.ಎನ್.ಭೋಸಲೆ, ಎಲ್.ಎಂ.ಮುಶಾಪುರೆ, ಎಸ್.ಎಂ.ಗುಡದೇಗೋಳ, ಮಂಜುನಾಥ ಮಲಸರ್ಜಿ, ಎಂ.ಬಿ.ಅಡವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಪೊಲೀಸ್ ವರಿಷ್ಠ ಲಕ್ಷ್ಮಣ ನಿಂಬರಗಿ, ಪೊಲೀಸ್ ಆಯುಕ್ತ ಡಾ.ತ್ಯಾಗರಾಜನ್ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.

Tags:

error: Content is protected !!