Belagavi

ಕನ್ನಡ ಧ್ವಜ ತೆರವಿಗೆ ಜನವರಿ 21ರವರೆಗೆ ಗಡುವು, ಇಲ್ಲವಾದರೆ ಗಲ್ಲಿಗಲ್ಲಿಗಳಲ್ಲಿ ಕೇಸರಿ ಧ್ವಜ ಹಾರಾಟ: ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಎಚ್ಚರಿಕೆ ನೀಡಿದ ಎಂಇಎಸ್

Share

ಬೆಳಗಾವಿ ಮಹಾನಗರ ಪಾಲಿಕೆ ಆವರಣದಲ್ಲಿ ಹಾರಿಸಲಾದ ಕನ್ನಡ ಧ್ವಜವನ್ನು ಜನವರಿ 20ರೊಳಗೆ ತೆರವುಗೊಳಿಸದಿದ್ದರೆ ಜನವರಿ 21ರಂದು ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿ, ಗಲ್ಲಿ ಗಲ್ಲಿಗಳಲ್ಲಿ ಕೇಸರಿ ಧ್ವಜ ಹಾರಿಸಲಾಗುವುದು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡರು ಮತ್ತು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು.

: ಬೆಳಗಾವಿ ಗಡಿ ವಿವಾದ ಸುಪ್ರೀಂ ಕೋರ್ಟ್‍ನಲ್ಲಿದೆ. ತಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಮರಾಠಿ ಭಾಷಿಕರು 1956ರಿಂದಲೂ ಹೋರಾಟ ಮಾಡುತ್ತಿದ್ದಾರೆ. ವಿವಾದ ಸುಪ್ರೀಂ ಕೋರ್ಟ್‍ನಲ್ಲಿ ಇರುವಾಗ ಮಹಾನಗರ ಪಾಲಿಕೆ ಆವರಣದಲ್ಲಿ ಡಿಸೆಂಬರ್ 28ರಂದು ಕರ್ನಾಟಕದ ಪರ ಇರುವ ಹಲವರು ಹಳದಿ, ಕೆಂಪು ಮಿಶ್ರಿತ ಬಾವುಟವನ್ನು ಹಾರಿಸಿ ನಗರದ ಮರಾಠಿಗರನ್ನು ಕೆಣಕಿದ್ದಾರೆ.

ಜನವರಿ 21ರೊಳಗೆ ಈ ಕೆಂಪು ಮತ್ತು ಹಳದಿ ಮಿಶ್ರಿತ ಬಾವುಟವನ್ನು ತೆರವುಗೊಳಿಸಬೇಕು. ಇಲ್ಲವಾದರೆ ಪಾಲಿಕೆ ಆವರಣ ಮತ್ತು ಬೆಳಗಾವಿ ನಗರದ ಗಲ್ಲಿ ಗಲ್ಲಿಗಳಲ್ಲಿ ಜನವರಿ 21ರಂದು ಕೇಸರಿ ಧ್ವಜ ಹಾರಿಸಲಾಗುವುದು ಎಂದು ಎಚ್ಚರಿಕೆ ನೀಡಿ ಎಂಇಎಸ್ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಎಂಇಎಸ್ ಮುಖಂಡರಿಂದ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿಗಳು ಲಭ್ಯ ಇರಲಿಲ್ಲ. ಒಂದು ಗಂಟೆ ನಂತರ ಮನವಿ ಸಲ್ಲಿಸಬಹುದು ಎಂದು ಪ್ರತಿಭಟನೆಕಾರರಿಗೆ ತಿಳಿಸಲಾಯಿತು. ಒಂದು ಗಂಟೆ ಕಾದರೂ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಎಂಇಎಸ್ ಮುಖಂಡರು ಪ್ರತಿಭಟನೆ ಆರಂಭಿಸಿದರು.ವಾತಾವರಣ ತಿಳಿಗೊಳಿಸಲು ಯತ್ನಿಸಿದ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಈ ವೇಳೆ ಎಂಇಎಸ್ ಮುಖಂಡರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಮಾಜಿ ಶಾಸಕ ಮನೋಹರ ಕಿಣೇಕರ, ನೇತಾಜಿ ಜಾಧವ್, ಪ್ರಕಾಶ ಶಿರೋಡಕರ, ರಣಜೀತ್ ಪಾಟೀಲ,ದೀಪಕ ದಳವಿ, ಕಲ್ಲಪ್ಪ ನಾಟೇಕರ, ನಾಮದೇವ ಪಾಟೀಲ. ಅರವಿಂದ ನಾಗನೂರೆ ಮತ್ತಿತರರು ಇದ್ದರು.

Tags:

error: Content is protected !!