Belagavi

ಅಮಿತ್ ಶಾ ಸ್ವಾಗತಕ್ಕೆ ಆಹ್ವಾನ ಇಲ್ಲದ ಹಿನ್ನೆಲೆ..ಬಿಜೆಪಿ ನಾಯಕಿ ದೀಪಾ ಕುಡಚಿ ಗರಂ..!

Share

ಬೆಳಗಾವಿಗೆ ಇಂದು ಮಧ್ಯಾಹ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ವಿಮಾನ ಮೂಲಕ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಆದರೆ ವಿಮಾನ ನಿಲ್ದಾಣದಲ್ಲಿ ನಾಯಕರ ಸ್ವಾಗತಕ್ಕೆ ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ತಮಗೆ ಬೇಕಾದವರಿಗೆ ಮಾತ್ರ ವಿಮಾನ ನಿಲ್ದಾಣ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸ್ಥಳೀಯ ನಾಯಕರನ್ನ ಕಡೆಗಣಿಸಿದ್ದಾರೆ ಎಂದು ಸ್ಥಳೀಯ ಧುರೀಣರು ಆರೋಪಿಸಿದ್ದಾರೆ.

ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿ ವತಿಯಿಂದ ಇಂದು ಆಯೋಜಿಸಿರುವ ಜನಸೇವಕ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ . ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಸಹಿತ ರಾಜ್ಯ ನಾಯಕರ ದಂಡು ಬೆಳಗಾವಿಗೆ ಆಗಮಿಸುತ್ತಿದೆ. ಆದರೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವ ಬಿಜೆಪಿ ನಾಯಕರ ಸ್ವಾಗತಕ್ಕೆ ಸ್ಥಳೀಯ ನಾಯಕರನ್ನು ಬಿಟ್ಟು ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ತಮಗೆ ಬೇಕಾದವರಿಗೆ ಮಾತ್ರ ವಿಮಾನ ನಿಲ್ದಾಣ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಶಿಸ್ತು ಬದ್ಧ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯಲ್ಲಿ ಅಶಿಸ್ತು ತಲೆ ಎತ್ತಿದೆ ಎಂದು ಸ್ಥಳೀಯ ನಾಯಕರು ವರಿಷ್ಠರಿಗೆ ದೂರು ನೀಡಿದ್ದಾರೆ ಎಂದು ಗೊತ್ತಾಗಿದೆ. ಮಾಜಿ ಶಾಸಕ ಶಶಿಕಾಂತ ನಾಯಕ, ಕೆಯುಡಬ್ಲೂಎಸ್ ನಿರ್ದೇಶಕಿ ದೀಪಾ ಕುಡಚಿ ಸೇರಿದಂತೆ ಹಲವರು ವಿಮಾನ ನಿಲ್ದಾಣ ಪ್ರವೇಶಕ್ಕೆ ಪಾಸ್ ಸಿಗದೇ ನಿಲ್ದಾಣದ ಹೊರಗೆ ನಿಂತಿದ್ದರು. ತಮ್ಮ ಅಸಮಾಧಾನ ತೋಡಿಕೊಂಡರು.

ಈ ವೇಳೆ ಕೆಯುಡಬ್ಲೂಎಸ್ ನಿರ್ದೇಶಕಿ ದೀಪಾ ಕುಡಚಿ ಮಾತನಾಡಿ, ಬಿಜೆಪಿ ನಾಯಕರು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಆದರೆ ಸ್ವಾಗತಿಸಲು ಬಿಜೆಪಿ ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ತಮಗೆ ಬೇಕಾದವರಿಗೆ ಮಾತ್ರ ವಿಮಾನ ನಿಲ್ದಾಣ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದಾರೆ. ನಿನ್ನೆ ಮೊನ್ನೆಯಿಂದ ಬಿಜೆಪಿಯಲ್ಲಿ ಓಡಾಡುತ್ತಿರುವ ಡಾ.ಸೋನಾಲಿ ಸರ್ನೋಬತ್ ಸಹಿತ ಹಲವರಿಗೆ ಪ್ರವೇಶಕ್ಕೆ ಪಾಸ್ ನೀಡಲಾಗಿದೆ. ಬಿಜೆಪಿ ರಾಜ್ಯ ಅಧ್ಯಕ್ಷರು ಸ್ವಾಗತಕ್ಕೆ ಯಾರಾರಿರಬೇಕು ಎಂದು ತಯಾರಿಸಿದ ಪಟ್ಟಿಯನ್ನು ಬದಿಗೆ ಸರಿಸಿ, ರಾತ್ರೋ ರಾತ್ರಿ ಪಟ್ಟಿಯನ್ನು ಬದಲಾಯಿಸಿ ತಮಗೆ ಬೇಕಾದವರಿಗೆ ಸಂಜಯ ಪಾಟೀಲ ಪಾಸ್ ಕೊಟ್ಟಿದ್ದಾರೆ. ಇದು ಅನ್ಯಾಯದ ಪರಮಾವಧಿ. ಶಿಸ್ತಿನ ಪಕ್ಷದಲ್ಲಿ ಕೆಲವರಿಂದಾಗಿ ಅಶಿಸ್ತು ತಲೆ ಎತ್ತಿದೆ. ಪ್ರೋಟೋಕಾಲ್ ಮರೆತು ಬೇಕಾಬಿಟ್ಟಿಯಾಗಿ ವರ್ತಿಸಲಾಗುತ್ತಿದೆ. ಹಿಂದಿನಿಂದಲೂ ಬಿಜೆಪಿಗಾಗಿ ಕೆಲಸ ಮಾಡಿರುವ ಶಶಿಕಾಂತ ನಾಯಕ ಅವರಂತಹ ನಾಯಕರೂ ಹೊರಗೆ ನಿಲ್ಲುವಂತಾಗಿದೆ. ಈ ಬಗ್ಗೆ ವರಿಷ್ಠರಿಗೆ ದೂರು ಸಲ್ಲಿಸಿದ್ದೇವೆ ಎಂದರು.

ಒಟ್ಟಿನಲ್ಲಿ ಬೆಳಗಾವಿಗೆ ಆಗಮಿಸುವ ಬಿಜೆಪಿ ನಾಯಕರ ಸ್ವಾಗತಕ್ಕೆ ವಿಮಾನ ನಿಲ್ದಾಣದಲ್ಲಿ ಪ್ರಮುಖ ನಾಯಕರೇ ಇಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ. ಶಿಸ್ತಿನ ಪಕ್ಷದಲ್ಲಿ ಅಶಿಸ್ತು ತಾಂಡವವಾಡುತ್ತಿದೆ ಎಂಬ ಆರೋಪಗಳು ಹೆಡೆ ಎತ್ತಿವೆ. ಕಾರ್ಯಕ್ರಮಕ್ಕೆ ಮುನ್ನವೇ ಅಸಮಾಧಾನದ ಅಲೆಗಳು ಅಪ್ಪಳಿಸುತ್ತಿವೆ.

Tags:

error: Content is protected !!