ಬೆಳಗಾವಿ ಯಳ್ಳೂರು ಕೋಟೆಯ ಬಳಿ ಯುವಕನೊಬ್ಬನನ್ನು ಮರಾಠಿ ಭಾಷಿಕ ಯುವಕರ ಗುಂಪೊಂದು ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುರುವಾರ ಮಧ್ಯಾಹ್ನ ಒಬ್ಬಂಟಿ ಯುವಕನನ್ನು ಮತ್ತೊಂದು ಯುವಕರ ಗುಂಪು ಥಳಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಯುವಕನಿಗೆ ಏಕೆ ಥಳಿಸಿದರು ಎಂಬ ಬಗ್ಗೆ ತರಹೇವಾರಿ ವದಂತಿಗಳು ಹರಡತೊಡಗಿವೆ.
ಬೆಳಗಾವಿ ಯಳ್ಳೂರು ಕೋಟೆ ಪ್ರದೇಶಕ್ಕೆ ವಿಹಾರಾರ್ಥ ತೆರಳುವವರ ಸಂಖ್ಯೆ ಹೆಚ್ಚುತ್ತಿದೆ. ಪ್ರಶಾಂತ ತಾಣ, ನಿಸರ್ಗದ ಮಡಿಲು ಅಲ್ಲಿರುವುದರಿಂದ ವಾಯು ವಿಹಾರಗಳಿಗೆ, ಪ್ರವಾಸ ಪ್ರಿಯರಿಗೆ ಯಳ್ಳೂರು ಕೋಟೆ ಪ್ರದೇಶ ಸ್ವರ್ಗ ಎನಿಸಿದೆ. ಆದರೆ ಗುರುವಾರ ಮಧ್ಯಾಹ್ನ ಯಳ್ಳೂರು ಕೋಟೆ ಪ್ರದೇಶದಲ್ಲಿ ಯುವಕನೊಬ್ಬನನ್ನು ಹಿಗ್ಗಾ ಮುಗ್ಗಾ ಥಳಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.
ಯಳ್ಳೂರು ಕೋಟೆ ಪ್ರದೇಶಕ್ಕೆ ಕುಡಿದು ಬಂದಿದ್ದ ಈ ಯುವಕ ಗಲಾಟೆ ಮಾಡುತ್ತಿದ್ದ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನು ವಿಡಿಯೋದಲ್ಲಿ ಧ್ವನಿಯೊಂದು ‘ಕನ್ನಡ ಮಾತಾಡು ಅಂತಾ ಹೇಳ್ತಿ, ಒದೆಯಿರಿ ಅವನನ್ನು..’ ಎಂದು ಮರಾಠಿಯಲ್ಲಿ ಹೇಳಿರುವುದು ಕೇಳುತ್ತಿದೆ. ಹಾಗಾಗಿ ಯುವಕನನ್ನು ಯಾವ ಕಾರಣಕ್ಕಾಗಿ ಅಷ್ಟೊಂದು ಥಳಿಸಿದರು? ಅವನ ಗತಿ ಏನಾಯಿತು? ಅಷ್ಟಕ್ಕೂ ಆ ಯುವಕ ಯಾರು? ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.ಯಳ್ಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈಗ ವದಂತಿಗಳದೇ ಕಾರುಬಾರು. ಪೊಲೀಸರು ಈ ಕುರಿತು ತನಿಖೆ ನಡೆಸಿ ಸತ್ಯಾಂಶ ಏನು ಎಂಬುದನ್ನು ತಿಳಿಸಬೇಕಿದೆ.