ಮಕರ ಸಂಕ್ರಾಂತಿಯು ಭಾರತದಾದ್ಯಂತ ಹಿಂದೂಗಳು ಆಚರಿಸುವ ಪ್ರಮುಖ ಸುಗ್ಗಿ ಹಬ್ಬವಾಗಿದೆ. ಇದು ವರ್ಷದ ಮೊದಲ ಹಬ್ಬವೂ ಹೌದು. ಬೆಳಗಾವಿ ಜಿಲ್ಲೆಯಲ್ಲೂ ಈ ಹಬ್ಬದ ಸಂಭ್ರಮ ಕಂಡು ಬಂತು. ಬಂಧುಗಳು, ನೆರೆಹೊರೆಯವರು, ಪರಿಚಯಸ್ಥರು ಒಂದೆಡೆ ಸೇರಿ ಹಬ್ಬ ಆಚರಿಸಿ, ಹಬ್ಬದ ಮೃಷ್ಟಾನ್ನ ಭೋಜನ ಸವಿದು ಸಂಭ್ರಮಿಸಿದರು.
ವರ್ಷದ ಮೊದಲ ಹಬ್ಬವೆಂದೇ ಹೇಳಲಾಗುವ ಸಂಕ್ರಾಂತಿಯನ್ನು ಗುರುವಾರ ಸಡಗರ, ಸಂಭ್ರಮದಿಂದ ಬೆಳಗಾವಿ ಜಿಲ್ಲೆಯಾದ್ಯಂತ ಆಚರಿಸಲಾಯಿತು. ರಾಜ್ಯಾದ್ಯಂತ ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಸಂಭ್ರಮ, ಸಡಗರದಿಂದ ಗುರುವಾರ ಆಚರಿಸಲಾಗಿದ್ದು, ಬೆಳಗಾವಿ ಜಿಲ್ಲೆಯಲ್ಲೂ ಈ ಹಬ್ಬದ ಸಂಭ್ರಮ ಕಂಡು ಬಂತು. ಈ ಹಬ್ಬದ ದಿನ ನದಿಗಳಲ್ಲಿ ಪುಣ್ಯ ಸ್ನಾನ ರೂಢಿಯಲ್ಲಿದೆ. ಸಂಕ್ರಾಂತಿ ದಿನದಂದು ಅನೇಕ ಆಧ್ಯಾತ್ಮಿಕ ಆಚರಣೆಗಳನ್ನು ನಡೆಸಲಾಗುತ್ತದೆ. ಜೊತೆಗೆ ಬಂಧುಗಳು, ನೆರೆಹೊರೆಯವರು, ಪರಿಚಯಸ್ಥರು ಒಂದೆಡೆ ಸೇರಿ ಹಬ್ಬದ ಊಟ ಮಾಡುವ ಮೂಲಕ ಸಂಭ್ರಮಿಸುತ್ತಾರೆ. ಬೆಳಗಾವಿ ಕೋಟೆ ಪ್ರದೇಶದಲ್ಲಿ ಅಲ್ಲಿಯ ನಿವಾಸಿಗಳು ಇಂದು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ, ಹಬ್ಬವನ್ನು ಆಚರಿಸಿದರು. ಹೆಣ್ಣುಮಕ್ಕಳು ಇಳಕಲ್ ಸೀರೆ ಧರಿಸಿ, ಸಾಮೂಹಿಕವಾಗಿ ಹಬ್ಬದ ಶುಭಾಶಯ ಹೇಳಿ ಸಂಭ್ರಮಿಸಿದರು. ನಂತರ ನಡೆದ ಸಾಮೂಹಿಕ ಭೋಜನ ಕಾರ್ಯಕ್ರಮದಲ್ಲಿ ಹಬ್ಬದ ಊಟ ಸವಿದು ನಲಿದರು.
ಈ ವೇಳೆ ಕೋಟೆ ಪ್ರದೇಶದ ನಿವಾಸಿ ಚಂದ್ರಶೇಖರಯ್ಯ ಸವದಿ ಮಾತನಾಡಿ, ಸಂಕ್ರಾಂತಿ ಹಬ್ಬದಂದು ನದಿ, ಕೆರೆ ಮತ್ತಿತರ ಜಲ ಮೂಲಗಳಿಗೆ ಹೋಗಿ ಪುಣ್ಯಸ್ನಾನ ಮಾಡುವುದು ರೂಢಿ. ಆದರೆ ಈ ಸಂಪ್ರದಾಯದ ಆಚರಣೆ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಅದಕ್ಕಾಗಿ ಇದ್ದ ಜಾಗದಲ್ಲೇ ಸ್ವಚ್ಛತೆ ಕಾರ್ಯಕ್ರಮ ನಡೆಸಿದ್ದೇವೆ. ಹೆಣ್ಣುಮಕ್ಕಳು ತರತರದ ಸೀರೆ ಧರಿಸಿ, ಹಬ್ಬವನ್ನು ಸಂಭ್ರಮಿಸಿದ್ದಾರೆ. ಸಾಮೂಹಿಕವಾಗಿ ಹಬ್ಬದ ಊಟ ಮಾಡಿದ್ದೇವೆ ಎಂದರು.
ಈ ವೇಲೆ ವಿಜಯಶಾಸ್ತ್ರೀ ಹಿರೇಮಠ ಮಾತನಾಡಿ, ಮಕರ ಸಂಕ್ರಾಂತಿಯು ಚಳಿಗಾಲದ ಅಂತ್ಯ ಮತ್ತು ಸೂರ್ಯನ ಉತ್ತರ ದಿಕ್ಕಿನ ಪ್ರಯಾಣದ ಸಂಕೇತವಾಗಿದೆ. ದೀರ್ಘ ದಿನಗಳ ಆರಂಭವನ್ನು ಸೂಚಿಸುತ್ತದೆ. ಈ ಅವಧಿಯನ್ನು ಉತ್ತರಾಯಣ ಎಂದು ಸಹ ಕರೆಯಲಾಗುತ್ತಿದ್ದು, ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಎಳ್ಳು ಮತ್ತು ಬೆಲ್ಲದ ಲಾಡೂ ಅಥವಾ ಚಿಕ್ಕಿಗಳನ್ನು ಹಂಚಲಾಗುತ್ತದೆ. ಭಿನ್ನಾಭಿಪ್ರಾಯಗಳ ನಡುವೆಯೂ ಜನರು ಶಾಂತಿ ಮತ್ತು ಸೌಹಾರ್ದತೆಯಿಂದ ಇರಬೇಕು ಎಂಬುದನ್ನು ಈ ಸಿಹಿಯು ಸೂಚಿಸುತ್ತದೆ ಎಂದರು.
ಒಟ್ಟಿನಲ್ಲಿ ಸಂಕ್ರಾಂತಿ ಹಬ್ಬ ಪ್ರಗತಿಯ ಸಂಕೇತವಾಗಿದೆ. ದೀರ್ಘ ದಿನಗಳ ಆರಂಭವನ್ನು ಸೂಚಿಸುವ ಮಹತ್ವದ ಕಾಲಘಟ್ಟ. ಜನರು ಮಕರ ಸಂಕ್ರಾಂತಿಯನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಸೂರ್ಯನ ಪಯಣದ ದಿಕ್ಕನ್ನು ಉತ್ಸಾಹದಿಂದ ಸ್ವಾಗತಿಸಿದ್ದಾರೆ.