ಸರ್ಕಾರಕ್ಕೆ 14.74 ಕೋಟಿ ರೂ. ಜಿಎಸ್ಟಿ ತೆರಿಗೆ ಹಣ ವಂಚಿಸಿರುವ ಮಂಗಳೂರಿನ ಸುವರ್ಣ ಬಿಲ್ಡಕಾನ್ ಪ್ರೈ ಲಿಮಿಟೆಡ್ ವಿರುದ್ಧ ಜನವರಿ 11ರಂದು ಪ್ರಕರಣ ದಾಖಲಿಸಿಕೊಂಡು ಕಂಪನಿಯ ನಿರ್ದೇಶಕ ಮನೋಜಕುಮಾರ್ ಪ್ರಾಣನಾಥ ಅಬರೋಲ್ ಎಂಬುವವನ್ನು ಬಂಧಿಸಲಾಗಿದೆ. ಆರೋಪಿಯನ್ನು ಜನವರಿ 25ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಎಸ್ಟಿ ಇಂಟಲ್ಜೆನ್ಸ್ ಇಲಾಖೆಯ ಪ್ರಧಾನ ಹೆಚ್ಚುವರಿ ನಿರ್ದೇಶಕ ಜಾನೇ ಕರುಣಾ ನಾಥನೈಲ್ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಪ್ರಕಟಣೆ ನೀಡಿರುವ ಜಿಎಸ್ಟಿ ಇಂಟಲ್ಜೆನ್ಸ್ ಇಲಾಖೆಯ ಪ್ರಧಾನ ಹೆಚ್ಚುವರಿ ನಿರ್ದೇಶಕ ಜಾನೇ ಕರುಣಾ ನಾಥನೈಲ್, ಮಹಾರಾಷ್ಟ್ರದ ಪುಣೆಯಲ್ಲಿ ಕೇಂದ್ರ ಕಚೇರಿ ಹೊಂದಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಟ್ಟಡ ನಿರ್ಮಾಣ, ರಸ್ತೆ ಸೇರಿ ಸರ್ಕಾರದ ಕಾಮಗಾರಿ ಗುತ್ತಿಗೆ ನಿರ್ವಹಿಸುತ್ತಿರುವ ಸುವರ್ಣ ಬಿಲ್ಡಕಾನ್ ಪ್ರೈ ಲಿಮಿಟೆಡ್ 14.74 ಕೋಟಿ ರೂ. ಜಿಎಸ್ಟಿ ತೆರಿಗೆ ವಂಚಿಸಿದೆ. ರಸ್ತೆ ನಿರ್ಮಾಣ ಸೇರಿದಂತೆ ಸರ್ಕಾರದ ವಿವಿಧ ಕಾಮಗಾರಿಗಳನ್ನು ನಿರ್ವಹಣೆ ಗುತ್ತಿಗೆ ಪಡೆದಿರುವ ಸಂಸ್ಥೆಯು 11 ಕಚ್ಚಾ ಸಾಮಗ್ರಿ ಪೂರೈಕೆದಾರರಿಂದ ನಕಲಿ ಬಿಲ್ ಪಡೆದು ತೆರಿಗೆ ವಂಚಿಸಿರುವುದು ಪತ್ತೆಯಾಗಿದೆ. ಈ ಸಂಬಂಧ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು ಜಿಎಸ್ಟಿ ತೆರಿಗೆ ವಂಚನೆಯ ಒಟ್ಟು 24 ಪ್ರಕರಣಗಳು ಬೆಳಕಿಗೆ ಬಂದಿದ್ದು, 77 ಕೋಟಿ ರೂ. ತೆರಿಗೆ ವಂಚಿಸಿರುವುದು ಪತ್ತೆಯಾಗಿದೆ ಎಂದು ಜಿಎಸ್ಟಿ ಇಂಟಲ್ಜೆನ್ಸ್ ಇಲಾಖೆಯ ಪ್ರಧಾನ ಹೆಚ್ಚುವರಿ ನಿರ್ದೇಶಕ ಜಾನೇ ಕರುಣಾ ನಾಥನೈಲ್ ಮಾಹಿತಿ ನೀಡಿದ್ದಾರೆ.