ಹಿಂದೆಯೂ ಕೂಡ ನಾವು ಸಾಮೂಹಿಕ ನಾಯಕತ್ವದಲ್ಲಿಯೇ ಚುನಾವಣೆ ಎದುರಿಸಿದ್ದೇವೆ. ಮುಂದೆಯೂ ಕೂಡ ಸಾಮೂಹಿಕ ನಾಯಕತ್ವದಲ್ಲಿಯೇ ಚುನಾವಣೆ ಎದುರಿಸುತ್ತೇವೆ. ಸಿಎಂ ಅಭ್ಯರ್ಥಿಯನ್ನು ಸಿಎಲ್‍ಪಿ ಮತ್ತು ಹೈಕಮಾಂಡ್ ಆಯ್ಕೆ ಮಾಡುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2023ಕ್ಕೆ ಕಾಂಗ್ರೆಸ್‍ನಲ್ಲಿ ಸಿಎಂ ರೇಸ್‍ನಲ್ಲಿ ಸಾಕಷ್ಟು ಜನರಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಶುಕ್ರವಾರ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಪ್ರತಿಕ್ರಿಯೆ ನೀಡಿದ ಸತೀಶ ಜಾರಕಿಹೊಳಿ 2023 ಇನ್ನು ಬಹಳ ದೂರ ಇದೆ. ಪಕ್ಷ ಕಟ್ಟಬೇಕು. 113 ಸೀಟ್ ಬಂದ್ರೆ ಮಾತ್ರ ನಾವು ಸರ್ಕಾರ ರಚಿಸಲು ಸಾಧ್ಯವಾಗುತ್ತದೆ. ಹೀಗಾಗಿ ನಮ್ಮ ಚಿಂತನೆ ಕೇವಲ 113 ಸೀಟಿನ ಕಡೆ ಮಾತ್ರ ಇರಬೇಕೆ ಹೊರತು ಸಿಎಂ ಹುದ್ದೆ ಕಡೆ ಅಲ್ಲ. ಅಂತಿಮವಾಗಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಮುಖ್ಯಮಂತ್ರಿಯನ್ನು ನಮ್ಮ ಶಾಸಕರು ಹೈಕಮಾಂಡ್ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಸಿದ್ದರಾಮಯ್ಯ-ಡಿಕೆಶಿ ನಡುವಿನ ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನೆಡೆಯಾಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಇದೇ ಪ್ರತಿಕ್ರಿಯೆ ನೀಡಿದ ಸತೀಶ ಜಾರಕಿಹೊಳಿ ಸಿದ್ದರಾಮಯ್ಯ, ಡಿಕೆಶಿ, ಸತೀಶ ಜಾರಕಿಹೊಳಿ ಯಾರೂ ಬೇರೆ ಇರುವುದಿಲ್ಲ. ಎಲ್ಲರೂ ಕಾಂಗ್ರೆಸ್ ಅಂತೆಯೇ ಇರುತ್ತಾರೆ. ನಾವು ಲೀಡರ್ ಶಿಪ್ ಮಾಡುತ್ತೇವೆ ನಮ್ಮ ವಿಚಾರಗಳು ಏನೇ ಇರಬಹುದು. ಆದ್ರೆ ಕಾರ್ಯಕರ್ತರು ಪಕ್ಷದ ಪರವಾಗಿಯೇ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಸಿಎಂ ಇಬ್ರಾಹಿಂ ಅಸಮಾಧಾನದ ಕುರಿತು ಇದೇ ವೇಳೆ ಮಾತನಾಡಿದ ಸತೀಶ ಜಾರಕಿಹೊಳಿ ಸಿಎಂ ಇಬ್ರಾಹಿಂ ಎಲ್ಲಿಯೂ ಹೋಗುವುದಿಲ್ಲ. ನಮ್ಮ ಜೊತೆಯೇ ಇರುತ್ತಾರೆ. ಕೆಲವು ಸಮಸ್ಯೆ ಆಗಿರಬಹುದು. ಅವುಗಳನ್ನು ಪರಿಹರಿಸಲು ಅವಕಾಶವಿದೆ. ಈಗಾಗಲೇ ನಾನು ಅವರ ಜೊತೆ ಮಾತನಾಡಿದ್ದೇನೆ ಎಂದು ಹೇಳಿದರು.
: ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭ ವಿಚಾರ ಸಂಬಂಧ ಮಾತನಾಡಿ ಹಂತ ಹಂತವಾಗಿ ಎಲ್ಲ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು. ಮಕ್ಕಳಿಗೆ ಯಾವುದೇ ರೀತಿ ತೊಂದರೆ ಆಗದಂತೆ ಸರ್ಕಾರ ಗಮನಹರಿಸಬೇಕು. ಬಸ್ ಪಾಸ್, ಶಾಲಾ ಶುಲ್ಕ ಸೇರಿದಂತೆ ಇನ್ನಿತರ ವಿಷಯದ ಬಗ್ಗೆ ತೀರ್ಮಾನ ಮಾಡಬೇಕು. ಇನ್ನು ಕೊರೊನಾ ಬಗೆಗಿನ ಭಯ ಬಿಟ್ಟು ಹೊರಗೆ ಬಂದು ಎಲ್ಲರೂ ಹೊಸ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಒಟ್ಟಾರೆ ಹಲವು ರಾಜಕೀಯ ವಿದ್ಯಾಮಾನಗಳ ಕುರಿತು ಸತೀಶ ಜಾರಕಿಹೊಳಿ ಮಾದ್ಯಮಗಳ ಜೊತೆ ಮಾತನಾಡಿದರು.