ಪೊಲೀಸ್ ಇಲಾಖೆಯ ಒತ್ತಡದ ಕೆಲಸದ ನಡುವೆಯೂ ಬೆಳಗಾವಿಯ ಅಧಿಕಾರಿಯೊಬ್ಬರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಏಷ್ಯಾದ ಅತ್ಯಂತ ಕಠಿಣ ಕ್ರೀಡಾಕೂಟ ಎನಿಸಿಕೊಂಡಿರುವ ‘ಐರನ್ಮ್ಯಾನ್ ಮಲೇಷ್ಯಾ’ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಬೆಳಗಾವಿಯ ಆರ್ಎಸ್ಐ ಸಂಗಮೇಶ್ ಅನಿ ಅವರು ದೇಶಕ್ಕೆ ಹಾಗೂ ಇಲಾಖೆಗೆ ಕೀರ್ತಿ ತಂದಿದ್ದಾರೆ.

ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆರ್.ಎಸ್.ಐ (Reserve Sub Inspector) ಆಗಿ ಸೇವೆ ಸಲ್ಲಿಸುತ್ತಿರುವ ಸಂಗಮೇಶ್ ಅನಿ ಅವರು, ಮಲೇಷ್ಯಾದ ಲಂಕಾವಿಯಲ್ಲಿ ನಡೆದ ‘ಐರನ್ಮ್ಯಾನ್’ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುನ್ನತ ‘ಐರನ್ಮ್ಯಾನ್’ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಏಷ್ಯಾದಲ್ಲೇ ಅತ್ಯಂತ ಕಠಿಣ ಕೋರ್ಸ್ ಎಂದು ಕರೆಯಲ್ಪಡುವ ಈ ಸ್ಪರ್ಧೆಯಲ್ಲಿ ಅರಬ್ಬಿ ಸಮುದ್ರದಲ್ಲಿ 3.8 ಕಿ.ಮೀ ಈಜು, ಗುಡ್ಡಗಾಡು ಪ್ರದೇಶದಲ್ಲಿ 180 ಕಿ.ಮೀ ಸೈಕ್ಲಿಂಗ್ ಹಾಗೂ ವಿಪರೀತ ಬಿಸಿಲು ಮತ್ತು ತೇವಾಂಶದ ನಡುವೆ 42 ಕಿ.ಮೀ ಓಟವನ್ನು ಯಾವುದೇ ವಿರಾಮವಿಲ್ಲದೆ ಪೂರ್ಣಗೊಳಿಸಬೇಕಿತ್ತು. ಒಟ್ಟು 226 ಕಿಲೋಮೀಟರ್ ದೂರವನ್ನು ಕೇವಲ 14 ಗಂಟೆ 30 ನಿಮಿಷಗಳಲ್ಲಿ ಕ್ರಮಿಸುವ ಮೂಲಕ ಸಂಗಮೇಶ್ ಅನಿ ಅವರು ಈ ಅಸಾಧಾರಣ ಸಾಧನೆ ಮಾಡಿದ್ದಾರೆ.
ಪೊಲೀಸ್ ಇಲಾಖೆಯ ಕಠಿಣ ಕರ್ತವ್ಯ, ರಾತ್ರಿ ಪಾಳಿ ಹಾಗೂ ಬಂದೋಬಸ್ತ್ ಒತ್ತಡಗಳ ನಡುವೆಯೂ ಸಂಗಮೇಶ್ ಅನಿ ಅವರು ತಮ್ಮ ಕ್ರೀಡಾ ಅಭ್ಯಾಸವನ್ನು ಎಂದಿಗೂ ನಿಲ್ಲಿಸಿರಲಿಲ್ಲ. ಪ್ರತಿದಿನ ಬೆಳಗ್ಗೆ 4 ಗಂಟೆಗೆ ಎದ್ದು ಈಜು ಅಭ್ಯಾಸ ನಡೆಸುತ್ತಿದ್ದ ಅವರು, ಕರ್ತವ್ಯಕ್ಕೆ ಹಾಜರಾಗುವ ಮುನ್ನ ಸೈಕ್ಲಿಂಗ್ ಮತ್ತು ಸಂಜೆ ಕರ್ತವ್ಯ ಮುಗಿದ ಬಳಿಕ ಓಟದ ಅಭ್ಯಾಸ ಮಾಡುತ್ತಿದ್ದರು. ಇವರ ಈ ನಿರಂತರ ಶ್ರಮ ಮತ್ತು ಶಿಸ್ತು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆಲುವು ತಂದುಕೊಟ್ಟಿದ್ದು, ಬೆಳಗಾವಿ ಪೊಲೀಸ್ ಇಲಾಖೆ ಹಾಗೂ ಇಡೀ ಕುಂದಾನಗರಿಗೆ ಹೆಮ್ಮೆ ತಂದಿದೆ.
